ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು 73ನೇ ಜನ್ಮದಿನದ ಸಂಭ್ರಮದಲ್ಲಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸೇರಿದಂತೆ ಗಣ್ಯಾತಿಗಣ್ಯರು ಶುಭಾಶಯಗಳನ್ನು ಕೋರಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್)ನಲ್ಲಿ ಪೋಸ್ಟ್ ಮಾಡಿ ಶುಭಾಶಯ ಕೋರಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನ ಹಿನ್ನೆಲೆಯಲ್ಲಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು. ನಿಮ್ಮ ದೂರದೃಷ್ಟಿ ಮತ್ತು ದೃಢವಾದ ನಾಯಕತ್ವದಿಂದ ‘ಅಮೃತ ಕಾಲ‘ದಲ್ಲಿ ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ದಾರಿ ಮಾಡಿಕೊಡಬೇಕೆಂದು ಬಯಸುತ್ತೇನೆ. ನೀವು ಯಾವಾಗಲೂ ಆರೋಗ್ಯವಂತರಾಗಿ ಮತ್ತು ಸಂತೋಷದಿಂದಿರಿ. ನಿಮ್ಮ ಅತ್ಯುನ್ನತ ನಾಯಕತ್ವದಿಂದ ದೇಶವಾಸಿಗಳಿಗೆ ಪ್ರಯೋಜನವಾಗಲಿ ಎಂದು ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿಯವರೂ ಕೂಡ ಮೋದಿಯವರಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.
ಮೋದಿ ಪ್ರಧಾನಿಯಾದ ನಂತರ ತಮ್ಮ ಜನ್ಮದಿನವನ್ನು ಪ್ರತಿವರ್ಷ ವಿಭಿನ್ನವಾಗಿ, ಜನೋಪಯೋಗಿ ಕಾರ್ಯಕ್ರಮಗಳ ಮೂಲಕ ಆಚರಿಸಿಕೊಂಡು ಬರುತ್ತಿದ್ದಾರೆ. ಈ ವರ್ಷ ದೆಹಲಿಯ ದ್ವಾರಕಾದಲ್ಲಿ ನಿರ್ಮಿಸಲಾದ ಭವ್ಯ ‘ಯಶೋಭೂಮಿ‘ ಸಮಾವೇಶ ಕೇಂದ್ರ ಉದ್ಘಾಟಿಸಲಿದ್ದಾರೆ. ಇದು ಬೃಹತ್ ಮುಖ್ಯ ಸಭಾಂಗಣ, 15 ಕನ್ವೆನ್ಶನ್ ಕೊಠಡಿಗಳು ಮತ್ತು ವಿಶೇಷವಾದ ಬಾಲ್ ರೂಂ ಹೊಂದಿದೆ. 11,000 ಪ್ರತಿನಿಧಿಗಳಿಗೆ ಇಲ್ಲಿ ವಸತಿ ಸೌಲಭ್ಯವಿದೆ. ‘ಯಶೋಭೂಮಿ’ಯಲ್ಲಿ ಪಾರ್ಕಿಂಗ್, ಭದ್ರತೆ ಹೀಗೆ ಎಲ್ಲ ಮಾನದಂಡಗಳ ಬಗ್ಗೆಯೂ ವಿಶೇಷ ಕಾಳಜಿ ವಹಿಸಿ ನಿರ್ಮಿಸಲಾಗಿದೆ.ನರೇಂದ್ರ ಮೋದಿ 17 ಸೆಪ್ಟೆಂಬರ್ 1950 ರಂದು ಗುಜರಾತ್ನ ಮಹೇಸನಾ ಜಿಲ್ಲೆಯ ವಡ್ನಗರ ಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದರು.