ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ಕಟ್ಟಿಗೆ ಹಳ್ಳಿ ಮಠದ ಸ್ವಾಮೀಜಿಗಳಾದ ಡಾ. ಮಹಾಂತೇಶ್ವರ ಮಹಾಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ. ಇವರು ಗ್ರಾಮದಲ್ಲಿ ನಡೆದಾಡುವ ದೇವರೆಂದೇ ಹೆಸರಾಗಿದ್ದರು.
ಡಾ. ಮಹಾಂತೇಶ್ವರ ಸ್ವಾಮೀಜಿ ಅವರಿಗೆ 72 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಾಮೀಜಿಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕ ತ್ಯಜಿಸಿದ್ದಾರೆ.
ಶುಕ್ರವಾರ ರಾತ್ರಿ ನಿಧನರಾಗಿರುವ ಅವರ ಪಾರ್ಥಿವ ಶರೀರವನ್ನು ಶ್ರೀ ಮಠಕ್ಕೆ ತರಲಾಗಿದ್ದು, ಸಾಣೆಹಳ್ಳಿ ಶ್ರೀಗಳು ಸೇರಿದಂತೆ ಹಲವಾರು ಗಣ್ಯರು ಅವರ ಅಂತಿಮ ದರ್ಶನ ಪಡೆದರು. ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಶನಿವಾರ ಸಂಜೆ 4.30ಕ್ಕೆ ಚಳಗೇರಿಯ ಕಟ್ಟಿಗೆ ಹಳ್ಳಿ ಮಠದಲ್ಲಿ ನಡೆಯಿತು.
ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳೆರಡಲ್ಲೂ ಮುಂದಾಳುವಾಗಿದ್ದ ಶ್ರೀಗಳು ನೀಡಿದ ಸಂದೇಶಗಳು ಅನೇಕರ ಬಾಳನ್ನು ಬೆಳಗಿವೆ. ಹಲವಾರು ಮಂದಿ ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಅವರ ಬಳಿ ಬರುತ್ತಿದ್ದರು ಮತ್ತು ಸಾಂತ್ವನ ಪಡೆಯುತ್ತಿದ್ದರು.
ಜ್ಞಾನದಾಹಿಯಾಗಿದ್ದ ಅವರು ನಿತ್ಯವೂ ಹಲವಾರು ಪುಸ್ತಕಗಳನ್ನು ಓದುತ್ತಿದ್ದರು. ಹೀಗಾಗಿ ಅವರ ಪ್ರವಚನಗಳು ಪ್ರಭಾಪೂರ್ಣವಾಗಿದ್ದವು. ಅವರು ಕವಿ, ತತ್ವಜ್ವಾನಿ, ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ಶ್ರೀ ಅರವಿಂದೋ (ಅರವಿಂದ ಘೋಷ್) ಅವರ ಬದುಕು ಮತ್ತು ಸಿದ್ಧಾಂತಗಳ ಅಧ್ಯಯನ ಮಾಡಿ ಡಾಕ್ಟರೇಟ್ ಪದವಿ ಪಡೆದಿದ್ದರು.