ಮಂಗಳೂರು: ಮಂಗಳೂರು ನಗರದ ನಾಗುರಿಯ ಗರೋಡಿ ಬಳಿ ರಿಕ್ಷಾದಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಗುರಿ ನಗರದ ಅತ್ಯಂತ ಪುರಾತನ ಶ್ರೀ ಕದ್ರಿ ದೇಗುಲವೇ ಆಗಿತ್ತು ಎನ್ನುವುದು ಎನ್‌ಐಎ ತನಿಖೆಯಿಂದ ಬಯಲಾಗಿದೆ.
2022 ನವೆಂಬರ್ 19ರಂದು ನಗರದ ನಾಗುರಿಯ ಗರೋಡಿ ಬಳಿ ಸಂಚಾರದಲ್ಲಿದ್ದ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಿತ್ತು.
ಪಡೀಲ್ ನಲ್ಲಿ ರಿಕ್ಷಾ ಹತ್ತಿದ್ದ ಶಂಕಿತ ಉಗ್ರ ಶಾರೀಕ್ ಬಳಿಯಿದ್ದ ಕುಕ್ಕರ್ ಬಾಂಬ್ ನಾಗುರಿ ಬಳಿ ಆಕಸ್ಮಿಕವಾಗಿ ಸ್ಪೋಟಗೊಂಡಿತ್ತು. ಇದರಿಂದ ಶಾರೀಕ್ ಹಾಗೂ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿಯವರು ಗಾಯಗೊಂಡಿದ್ದರು.
ಈ ಇಬ್ಬರನ್ನು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ರಿಕ್ಷಾ ಚಾಲಕ ಗುಣಮುಖರಾಗಿ ಮನೆಗೆ ಮರಳಿದ್ದರೆ, ಶಾರೀಕ್‌ನನ್ನು ಬೆಂಗಳೂರು ಆಸ್ಪತ್ರೆಗೆ ಶಿಪ್ಟ್ ಮಾಡಲಾಗಿತ್ತು. ಬಳಿಕ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಲಾಗಿತ್ತು. ಆದರೆ ಉಗ್ರ ಶಾರೀಕ್‌ನ ಕುಕ್ಕರ್ ಬಾಂಬ್ ಸ್ಫೋಟದ ಟಾರ್ಗೆಟ್ ಯಾವುದೆಂದು ತಿಳಿದು ಬಂದಿರಲಿಲ್ಲ.
ಇದೀಗ ಮೊದಲ ಬಾರಿಗೆ ಎನ್‌ಐಎ ಪ್ರಕಟಣೆಯಲ್ಲಿ ಉಗ್ರ ಶಾರೀಕ್‌ನ ಕುಕ್ಕರ್ ಬಾಂಬ್ ಸ್ಪೋಟದ ಟಾರ್ಗೆಟ್ ಕದ್ರಿ ದೇಗುಲವೇ ಆಗಿತ್ತು ಎಂದು ಪ್ರಕಟಣೆಯಾಗಿದೆ. ಕುಕ್ಕರ್ ಬಾಂಬ್ ಸ್ಫೋಟದ ರೂವಾರಿ ಮೋಸ್ಟ್ ವಾಂಟೆಡ್ ಉಗ್ರ ಅರಾಫತ್ ಆಲಿಯನ್ನು ದೆಹಲಿಯಲ್ಲಿ ಎರಡು ದಿನಗಳ ಹಿಂದೆ ಬಂಧಿಸಲಾಗಿತ್ತು. ಈತ ಮಂಗಳೂರು ಗೋಡೆಬರಹ ಮತ್ತು ಕುಕ್ಕರ್ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಆಗಿದ್ದ. ಈತನ ಬಂಧನದ ಪ್ರಕಟನೆಯಲ್ಲಿ ಉಗ್ರ ಶಾರೀಕ್ ಕದ್ರಿ ದೇವಸ್ಥಾನದಲ್ಲಿ ಬಾಂಬ್ ಸ್ಫೋಟಿಸಲು ಉದ್ದೇಶಿಸಿದ್ದ ಎಂದು ಬರೆಯಲಾಗಿದೆ.