ಪುತ್ತೂರು: ನಾವು ತಿನ್ನುವ ಆಹಾರ ನಮ್ಮ ಆರೋಗ್ಯದ ಮೇಲೆ ನಿರ್ಣಾಯಕ ಪರಿಣಾಮ ಬೀರುತಿದ್ದು, ಪ್ರಸ್ತುತ ಅನೇಕ ಕಲಬೆರಕೆ ವಸ್ತುಗಳೂ ಮಾರುಕಟ್ಟೆಯನ್ನು ಆವರಿಸಿಕೊಂಡಿರುವುದು ಇದಕ್ಕೆ ಕಾರಣ. ಈ ಬಗ್ಗೆ ಪ್ರತಿಯೊಬ್ಬರೂ ಜಾಗರೂಕತೆ ವಹಿಸುವುದು ಅತ್ಯಂತ ಅಗತ್ಯ ಎಂದು ಡಾ.ಪ್ರದೀಪ್ ಕುಮಾರ್ ಹೇಳಿದರು.
ಅವರು ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ಮನಃಶಾಸ್ತ್ರ ವಿಭಾಗ ಮುನ್ನಡೆಸುತ್ತಿರುವ ಚಿತ್ತ ಚಿಕಿತ್ಸಾ ಎಂಬ ಆಪ್ತ ಸಮಾಲೋಚನಾ ಕೇಂದ್ರದ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಆಧುನಿಕ ಜೀವನಶೈಲಿಯ ಮುಂದಿನ ಪರಿಣಾಮಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ವಾಟ್ಸಪ್ ಮೆಸೇಜ್ ಧಾವಂತದಿಂದಾಗಿ ಚೆನ್ನಾಗಿ ಪ್ರಚಾರ ಇದೆ ಅನ್ನುವ ಕಾರಣಕ್ಕೆ ಯಾವುದೋ ವಿದೇಶೀ ಹಣ್ಣುಗಳನ್ನು ನಾವು ಆರೋಗ್ಯಕ್ಕೆ ಪೂರಕ ಎಂಬಂತೆ ಸ್ವೀಕರಿಸುತ್ತಿದ್ದೇವೆ. ಆದರೆ ನಮ್ಮ ಪರಿಸರದ ಫಲವಸ್ತುಗಳು ನೀಡಬಹುದಾದ ಆರೋಗ್ಯವನ್ನು ಇನ್ಯಾವುದೋ ದೇಶದಲ್ಲಿ ಬೆಳೆದ ಹಣ್ಣು ನೀಡುವುದಕ್ಕೆ ಸಾಧ್ಯವಿಲ್ಲ ಎಂಬುದನ್ನು ಅರಿಯಬೇಕು ಎಂದು ಹೇಳಿದ ಅವರು, ರೋಗಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಮೊದಲು ರೋಗ ಬರದಂತೆ ದೇಹವನ್ನು ಕಾಪಾಡಿಕೊಳ್ಳುವ ಯೋಚನೆ ಮಾಡಬೇಕು. ಈ ನಿಟ್ಟಿನಲ್ಲಿ ಪಾರಂಪರಿಕ ಆಹಾರ ವ್ಯವಸ್ಥೆಗೆ ನಾವು ಮರಳಬೇಕಿದೆ. ನಿತ್ಯ ಯೋಗಾಭ್ಯಾಸ, ಪ್ರಾಣಾಯಾಮ ಮಾಡುವುದರಿಂದ ನಮ್ಮ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಬಹುದು ಎಂದು ತಿಳಿಸಿದರು.
ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನಃಶಾಸ್ತ್ರ ವಿಷಯವನ್ನು ಬೋಧಿಸುತ್ತಿರುವ ಹಲವು ಕಾಲೇಜುಗಳು ರಾಜ್ಯದಲ್ಲಿದ್ದರೂ ವಿಭಾಗದ ಮೂಲಕ ಆಪ್ತ ಸಮಾಲೋಚನಾ ಕೇಂದ್ರವನ್ನು ಮುನ್ನಡೆಸುತ್ತಿರುವ ಕಾಲೇಜುಗಳು ಅತ್ಯಂತ ವಿರಳ. ಅಂತಹ ಕೇಂದ್ರವನ್ನು ಮುನ್ನಡೆಸುವುದಕ್ಕೆ ಮನಃಶಾಸ್ತ್ರ ಉಪನ್ಯಾಸಕರಿಗೆ ಸಾಕಷ್ಟು ತಜ್ಞತೆ ಬೇಕು. ಅಂಬಿಕಾ ಮಹಾವಿದ್ಯಾಲಯದ ಮನಃಶಾಸ್ತ್ರ ವಿಭಾಗ ಕಳೆದ ಒಂದು ವರ್ಷದಿಂದ ಆಪ್ತಸಮಾಲೋಚನಾ ಕೇಂದ್ರವನ್ನು ಮುನ್ನಡೆಸುತ್ತಿದ್ದು, ವಿದ್ಯಾರ್ಥಿಗಳಷ್ಟೇ ಅಲ್ಲದೆ ಸಾರ್ವಜನಿಕರೂ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದರು.
ವೇದಿಕೆಯಲ್ಲಿ ಕಾಲೇಜಿನ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಕಾಂತ ಗೋರೆ, ಕಾರ್ಯಕ್ರಮ ಆಯೋಜನಾ ಸಮಿತಿ ಸದಸ್ಯ ಗಿರೀಶ ಭಟ್ ಕೂವೆತ್ತಂಡ, ವಿದ್ಯಾರ್ಥಿ ಸಂಯೋಜಕಿ ದೀಕ್ಷಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಪರ್ಣಾ ಪ್ರಾರ್ಥಿಸಿದರು. ವಿದ್ಯಾರ್ಥಿ ನವೀನ್ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿನಿ ಅಭೇದ ಗೋವಿಂದ ಭಟ್ ವಂದಿಸಿದರು.