ಬೆಂಗಳೂರು: ರಾಜ್ಯಾದ್ಯಂತ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಹಾಗೂ ರಾಸಾಯನಿಕ ಗುಣಗಳುಳ್ಳ ವಸ್ತುಗಳನ್ನು ಬಳಸಿ ತಯಾರಿಸಲಾದ ಗಣೇಶ ಮೂರ್ತಿಗಳ ಉತ್ಪಾದನೆ, ಮಾರಾಟ ಹಾಗೂ ವಿಸರ್ಜನೆ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಆದೇಶವನ್ನು ಅನುಷ್ಠಾನಗೊಳಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ರಾಜ್ಯದ ಎಲ್ಲಾ ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆಗಳು, ಪೊಲೀಸ್ ಇಲಾಖೆ ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಬಿ.ಎನ್.ಪ್ರವೀಣ್ ಸೂಚಿಸಿದ್ದಾರೆ.
ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ಮುಖ್ಯ ಪೀಠ ಆದೇಶದ ಪ್ರಕಾರ, ನೀರಿನ ಮೂಲಗಳನ್ನು ನಾವು ರಕ್ಷಿಸಿಕೊಳ್ಳಬೇಕು. POP ಮೂರ್ತಿಗಳ ವಿಸರ್ಜನೆಯಿಂದಾಗಿ ಜಲಮೂಲಗಳು ಕಲುಷಿತವಾಗುತ್ತಿದ್ದು, ಅದನ್ನು ಕೇಂದ್ರ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಜಲ (ಮಾಲಿನ್ಯ ನಿಯಂತ್ರಣ ಮತ್ತು ನಿವಾರಣ) ಕಾಯ್ದೆಯಲ್ಲಿನ ಕಲಂ 33(ಎ) ಹಾಗೂ ಇನ್ನಿತರ ಕಲಂಗಳಲ್ಲಿ, ಪುದತ್ತವಾದ ಅಧಿಕಾರವನ್ನು ಚಲಾಯಿಸಿ ಸೂಕ್ತ ಕ್ರಮ ಜರುಗಿಸಬೇಕೆಂದು ಸ್ಪಷ್ಟವಾಗಿ ಆದೇಶಿಸಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಈಗಾಗಲೆ ಹೊರಡಿಸಿರುವ ಅಧಿಸೂಚನೆಯಲ್ಲಿ ಯಾವುದೇ ರಾಸಾಯನಿಕ ಬಣ್ಣ ಸಹಿತ ಪಿಒಪಿ ವಿಗ್ರಹಗಳನ್ನು ಯಾವುದೇ ನೀರಿನ ಮೂಲಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ ಹಾಗೂ ಅವುಗಳ ಉತ್ಪಾದನೆ ಸಹಾ ಮಾಡದಂತೆ ಸೂಚಿಸಲಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಮೇ 12ರಂದು ಪರಿಷ್ಕೃತ ಮಾರ್ಗಸೂಚಿಯನ್ನು ಹೊರಡಿಸಿ, ನೀರಿನ ಮೂಲಗಳನ್ನು ಸಂರಕ್ಷಿಸುವ ದೃಷ್ಟಿಯಿಂದ ಪಿಒಪಿ ಮೂರ್ತಿಗಳ ಉತ್ಪಾದನೆ, ಮಾರಾಟ ಹಾಗು ವಿಸರ್ಜನೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ನಿಯಮ ಉಲ್ಲಂಘಿಸಿದರೆ ಭಾರಿ ದಂಡದೊಂದಿಗೆ ಜೈಲು ಶಿಕ್ಷೆ
ಜಲ (ಮಾಲಿನ್ಯ ನಿಯಂತ್ರಣ ಮತ್ತು ನಿವಾರಣ) ಕಾಯ್ದೆ, 1974ರ ಕಲಂ 33(A) ಅಡಿಯಲ್ಲಿ ಈ ರೀತಿಯ ವಿಗ್ರಹಗಳ ಉತ್ಪಾದನಾ ಘಟಕವನ್ನು ಮುಚ್ಚುವ ಹಾಗೂ ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶ ಇರುತ್ತದೆ. ಸದರಿ ವಿಗ್ರಹಗಳನ್ನು ಯಾವುದೇ ನೀರಿನ ಮೂಲಗಳಿಗೆ ವಿಸರ್ಜಿಸುವುದು ಸಹ ಕಾಯ್ದೆಯ ಕಲಂ 24ರ ಸ್ಪಷ್ಟ ಉಲ್ಲಂಘನೆಯಾಗಿದೆ. ಅದು ಕಾಯ್ದೆಯ ಕಲಂ 41 ಹಾಗು 43ರ ಪುಕಾರ ಶಿಕ್ಷಾರ್ಹ ಅಪರಾಧವಾಗುತ್ತದೆ.
ಅಪರಾಧಕ್ಕೆ ದಂಡದೊಂದಿಗೆ ಕನಿಷ್ಠ ಒಂದೂವರೆ ವರ್ಷ ಹಾಗೂ ಗರಿಷ್ಠ ಆರು ವರ್ಷಗಳ ಕಾರಾಗೃಹವಾಸದ ಜತೆಗೆ ಉಲ್ಲಂಘನೆಗೆ ಪರಿಸರ (ಸಂರಕ್ಷಣಾ) ಕಾಯ್ದೆ, 1986 ರಡಿಯಲ್ಲಿಯೂ ಸಹಾ ಕ್ರಮ ಜರುಗಿಸಬಹುದಾಗಿರುತ್ತದೆ. ನಿಯಮ ಉಲ್ಲಂಘಿಸುವ ಉದ್ಯಮ ಅಥವಾ ಉತ್ಪಾದನಾ ಘಟಕವನ್ನು ಪರಿಸರ (ಸಂರಕ್ಷಣಾ) ಕಾಯ್ದೆ, 1986 ಕಲಂ 5 ರಡಿಯಲ್ಲಿ ಮುಚ್ಚುವ ಹಾಗೂ ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶ ಇರುತ್ತದೆ. ಮುಂದುವರಿದು, ಈ ಕಾಯ್ದೆಯ ಉಲ್ಲಂಘನೆ ಕಲಂ 15 ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದ್ದು, ಅದಕ್ಕೆ ಗರಿಷ್ಠ ಒಂದು ಲಕ್ಷ ರೂಪಾಯಿಗಳ ದಂಡದೊಂದಿಗೆ ಗರಿಷ್ಠ 5 ವರ್ಷದ ಕಾರಾಗೃಹವಾಸದ ಅವಕಾಶವಿರುತ್ತದೆ.