ಪುತ್ತೂರು: ಶಾಸಕರ ನೂತನ ಕಚೇರಿಗೆ ಪುತ್ತೂರು ನಗರಸಭಾ ನಿಧಿಯ ದುರುಪಯೋಗವಾಗಿದೆ ಮತ್ತು ನಗರಸಭೆಯ ನಗರೋತ್ಥಾನದ ವಿವಿಧ ಕಾಮಗಾರಿ ವಿಳಂಬ ಸಹಿತ ನಗರಸಭೆ 2ನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ಇನ್ನೂ ಆಗಿಲ್ಲ ಎಂದು ನಗರಸಭೆ ಬಿಜೆಪಿ ಸದಸ್ಯರು ನಗರಸಭೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಮುಲೈಮುಗಿಲನ್ ಅವರಿಗೆ ಪುತ್ತೂರಿನಲ್ಲಿ ದೂರು ನೀಡಿದರು.
ಪುತ್ತೂರು ತಾಲೂಕು ಆಡಳಿತಕ್ಕೆ ಜಿಲ್ಲಾಧಿಕಾರಿಯವರು ಸೆ.15 ರಂದು ಆಗಮಿಸಿದ ವೇಳೆ ಸದಸ್ಯರು ಮನವಿ ಮಾಡಿದ್ದಾರೆ.
ಪುತ್ತೂರು ಶಾಸಕರು ನಮ್ಮ ನಗರ ಸಭೆಯ ಕಟ್ಟಡದಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ನಗರ ಯೋಜನಾ ಪ್ರಾಧಿಕಾರದ ಕಚೇರಿಯನ್ನು ಅಲ್ಲಿಂದ ತೆರವುಗೊಳಿಸಿ ತಮ್ಮ ಶಾಸಕರ ಕೊಠಡಿಯನ್ನಾಗಿ ಪರಿವರ್ತಿಸಿರುತ್ತಾರೆ. ಅಲ್ಲದೆ ಸದ್ರಿ ಕಚೇರಿಯ ನವೀಕರಣಕ್ಕೆ, ಸುಮಾರು 31 ಲಕ್ಷ ರೂಪಾಯಿಗಳನ್ನು ಸಾರ್ವಜನಿಕರ ತೆರಿಗೆ ಹಣವನ್ನು ನಗರಸಭಾ ನಿಧಿಯಿಂದ ನೀಡುವಂತೆ ತಮ್ಮ ಮೂಲಕ ಆದೇಶ ನೀಡಲಾಗಿದೆ. ಈ ರೀತಿ ನಾಗರಿಕರಿಂದ ಸಂಗ್ರಹವಾದ ತೆರಿಗೆ ಹಣವನ್ನು ನಗರಸಭಾ ನಿಧಿಯಿಂದ ಶಾಸಕರ ಐಷಾರಾಮಿ ಕಚೇರಿಯ ಅಭಿವೃದ್ಧಿಗೆ ನೀಡಲು ಚುನಾಯಿತ ಸದಸ್ಯರುಗಳಾದ ನಮ್ಮ ಆಕ್ಷೇಪವಿರುತ್ತದೆ. ಅದಲ್ಲದೇ ಈ ಹಿಂದಿನ ಅವಧಿಯಲ್ಲಿ ಮಂಜೂರಾದ ಅಮೃತ ನಗರೋತ್ಥಾನದ ಕಾಮಗಾರಿಗಳು ಆರಂಭವಾಗಿರುವುದಿಲ್ಲ. ನಗರಸಭೆಯ ಎರಡನೆಯ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ತೊಡಕು ಇನ್ನೂ ನಿವಾರಣೆಯಾಗಿರುವುದಿಲ್ಲ. ಆದ್ದರಿಂದ ತಾವು ಈ ಎಲ್ಲಾ ವಿಚಾರಗಳ ಬಗ್ಗೆ ಪರಿಶೀಲಿಸಿ ಚುನಾಯಿತ ಸದಸ್ಯರಾದ ನಮ್ಮ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ವಿನಂತಿಸುತ್ತಿದ್ದೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ. ಜೀವಂಧರ್ ಜೈನ್, ನಿಕಟಪೂರ್ವ ಉಪಾಧ್ಯಕ್ಷೆ ವಿದ್ಯಾ ಗೌರಿ, ಸದಸ್ಯರಾದ ಪಿ.ಜಿ. ಜಗನ್ನಿವಾಸ ರಾವ್, ಭಾಮಿ ಅಶೋಕ್ ಶೆಣೈ, ಮನೋಹರ್ ಕಲ್ಲಾರೆ, ನವೀನ್ ಪೆರಿಯತ್ತೋಡಿ, ಪ್ರೇಮ್, ಸಂತೋಷ್ ಬೊಳುವಾರು, ಸುಂದರ ಪೂಜಾರಿ ಬಡಾವು, ಶೀನಪ್ಪ ನಾಯ್ಕ್, ಪದ್ಮನಾಭ ಪಡೀಲ್, ವಸಂತ ಕಾರೆಕ್ಕಾಡು, ಬಾಲಚಂದ್ರ, ಶಶಿಕಲಾ ಸಿ.ಎಸ್, ಪ್ರೇಮಲತಾ ನಂದಿಲ, ಮೋಹಿನಿ ವಿಶ್ವನಾಥ್, ಮಮತಾ ರಂಜನ್, ಯಶೋದಾ ಹರೀಶ್, ಗೌರಿ ಬನ್ನೂರು, ಲೀಲಾವತಿ, ದೀಕ್ಷಾ ಪೈ, ಇಂದಿರಾ, ರೋಹಿಣಿ ಈ ಸಂದರ್ಭ ಉಪಸ್ಥಿತರಿದ್ದರು.