ಪುತ್ತೂರು: ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಛೇರಿ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸಹಯೋಗದಲ್ಲಿ ಪ್ರೌಢಶಾಲಾ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಒಳಾಂಗಣ ಕ್ರೀಡಾಂಗಣದಲ್ಲಿ ಜರುಗಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣ ಭಟ್ ಕೊಂಕೋಡಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅನ್ಯಾನ್ಯ ಕಾರ್ಯಕ್ರಮಗಳಿಗೆ ವಿವೇಕಾನಂದ ವಿದ್ಯಾಸಂಸ್ಥೆಗಳ ಸಹಾಯ ಸದಾ ಇದ್ದು ಇಂದು ನಡೆಯುತ್ತಿರುವ ಪಂದ್ಯಾಟವು ಎಲ್ಲಾ ಸ್ಪರ್ಧಾರ್ಥಿಗಳಲ್ಲೂ ಸ್ಪರ್ಧಾ ಮನೋಭಾವಕ್ಕಿಂತ ಹೆಚ್ಚು ದೈಹಿಕ, ಮಾನಸಿಕ ಹಾಗು ಬೌದ್ಧಿಕ ಶಕ್ತಿಯನ್ನು ಬೆಳೆಸಲು ಸಹಕಾರಿಯಾಗಲಿ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ದೀಪ ಬೆಳಗಿಸಿ ಉದ್ಘಾಟಿಸಿ, ಪಂದ್ಯಾಟದ ಯಶಸ್ಸು ದೈಹಿಕ ಶಿಕ್ಷಕರ, ತರಬೇತುದಾರರ ಹಾಗೂ ಸ್ಪರ್ಧಾರ್ಥಿಗಳ ಸಹಕಾರ ಮನೋಭಾವದಲ್ಲಿದೆ ಎಂದರು.
ಜಿಲ್ಲಾ ದೈಹಿಕ ಶಿಕ್ಷಣ ನಿರ್ದೇಶಕ ಭುವನೇಶ್, ಮಹಾಲಿಂಗೇಶ್ವರ ಆಡಳಿತ ಸಮಿತಿಯ ಸದಸ್ಯೆ ಡಾ. ಸುಧಾ ರಾವ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ರೂಪಲೇಖ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ಚಂದ್ರ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯದರ್ಶಿ ಹರೀಶ್ ರೈ, ತಾಲೂಕು ಸಂಘದ ಅಧ್ಯಕ್ಷ ಕೆ. ಸೀತಾರಾಮ ಗೌಡ, ಗ್ರೇಡ-2 ಅಧ್ಯಕ್ಷ ಸುಧಾಕರ್ ರೈ, ಪ್ರಾಥಮಿಕ ಶಾಲಾ ಸಹ ಶಿಕ್ಷಕ ಸಂಘದ ಅಧ್ಯಕ್ಷ ನವೀನ ರೈ, ಅಬ್ರಹಾಮ್, ರೇಡಿಯೋ ಪಾಂಚಜನ್ಯ ಆಡಳಿತ ಸಮಿತಿ ಅಧ್ಯಕ್ಷ, ಸಂಪನ್ಮೂಲ ವ್ಯಕ್ತಿ ಕೃಷ್ಣವೇಣಿ ಮುಳಿಯ, ನ್ಯಾಯವಾದಿ ಹರುಣಾಕ್ಷಿ ಜೆ. ಶೆಟ್ಟಿ, ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಜಯಂತ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ, ರಾಜ್ಯ ಪ್ರಶಸ್ತಿ ವಿಜೇತ ದಯಾನಂದ ಕೊರ್ಮಂಡ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಸಂಚಾಲಕ ರವಿನಾರಾಯಣ, ಮುಖ್ಯ ಶಿಕ್ಷಕ ಸತೀಶ್ ರೈ ಉಪಸ್ಥಿತರಿದ್ದರು.
ಕನ್ನಡ ಶಾಲಾ ಆವರಣದಿಂದ ಚೆಂಡೆ ವಾದ್ಯಗಳೊಂದಿಗೆ ಹೊರಟ ವೈಭವದ ಮೆರವಣಿಗೆಯಲ್ಲಿ ಎಲ್ಲಾ ಅಭ್ಯಾಗತರನ್ನೂ ರಾಜ್ಯ, ಜಿಲ್ಲಾ ಮಟ್ಟದ ವಿಜೇತ ಮಕ್ಕಳ ತಂಡಗಳು, ಶಿಕ್ಷಕರು, ಪಂದ್ಯಾಂಗಣಕ್ಕೆ ಕರೆತoದರು. ಬಳಿಕ ಭಾರತ ಮಾತೆಗೆ ಪುಷ್ಪಾರ್ಚನೆ ನೆರವೇರಿಸಿ ಪ್ರಾರ್ಥನೆಯೊಂದಿಗೆ ಚಾಲನೆ ನೀಡಲಾಯಿತು. ಜಿಲ್ಲಾ ದೈಹಿಕ ಶಿಕ್ಷಣ ನಿರ್ದೇಕ ಭುವನೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಶಿಕ್ಷಕಿ ಆಶಾ ಬೆಳ್ಳಾರೆ ಸ್ವಾಗತಿಸಿ, ಶಾಲಾ ಸಂಚಾಲಕ ವಸಂತ ಸುವರ್ಣ ವಂದಿಸಿದರು.
ಫಲಿತಾಂಶ:
ಜಿಲ್ಲೆಯ ಏಳು ತಾಲೂಕುಗಳಿಂದ ಏಳು ಬಾಲಕರ ಹಾಗೂ ಏಳು ಬಾಲಕಿಯರ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿ, ಬಾಲಕರ ವಿಭಾಗದಲ್ಲಿ ಪುತ್ತೂರು ತಾಲೂಕಿನ ಶ್ರೀ ರಾಮಕುಂಜೆಶ್ವರ ಪ್ರೌಢಶಾಲೆ ಪ್ರಥಮ ಹಾಗೂ ಕೆಪಿಎಸ್ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಬಾಲಕಿಯರ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪ್ರಥಮ ಹಾಗೂ ಭಗವತಿ ಪ್ರೌಢಶಾಲೆ ಮಂಗಳೂರು ದಕ್ಷಿಣ ದ್ವಿತೀಯ ಸ್ಥಾನ ಪಡೆದುಕೊಂಡರು.
ಸಮಾರೋಪ :
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಪುತ್ತೂರು ಮಹಿಳಾ ಠಾಣಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸೇಸಮ್ಮ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ತಮ್ಮ ಶಾಲಾ ದಿನಗಳ ಕ್ರೀಡಾ ಭಾಗವಹಿಸುವಿಕೆಯ ಅನುಭವಗಳನ್ನು ಹಂಚಿಕೊಂಡರು . ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ವಿಷ್ಣು ಗಣಪತಿ ಭಟ್ ಶುಭ ಹಾರೈಸಿದರು.