ಪುತ್ತೂರು: ರೈತರ ಅನುಕೂಲಕ್ಕಾಗಿ ಬೆಳೆ ಸಮೀಕ್ಷೆ ಅವಧಿ ವಿಸ್ತರಿಸುವಂತೆ ಮಾಜಿ ಶಾಸಕ ಸಂಜೀವ ಮಠಂದೂರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಕಳೆದ ಐದು ವರ್ಷಗಳ ಹಿಂದೆ ಆರಂಭ ಮಾಡಿದ ಮುಂಗಾರು ಹಾಗೂ ಹಿಂಗಾರು ಬೆಳೆ ಸಮೀಕ್ಷೆಗೆ ಸರಕಾರ ನ. 15 ಕೊನೆಯ ದಿನಾಂಕ ನಿಗದಿ ಮಾಡಿದೆ. ಈ ಬಾರಿ ಮುಂಗಾರು ತಡವಾಗಿದ್ದು ಹಾಗೂ ಮಳೆ ಕೊರತೆಯಾಗಿದ್ದು ರೈತರು ಕೃಷಿ ಕಾರ್ಯವನ್ನು ತಡವಾಗಿ ಆರಂಭ ಮಾಡುವಂತೆ ಆಗಿದೆ. ರೈತರಿಗೆ ಹವಾಮಾನ ವೈಪರೀತ್ಯದಿಂದ ಅನಾನುಕೂಲ ಆಗಿದೆ. ಕಳೆದ ಮೂರು ವರ್ಷದಿಂದ ರೈತರಿಗೆ ಪ್ರಧಾನ ಮಂತ್ರಿ ಫಸಲು ವಿಮಾ ಹಾಗೂ ವಾಣಿಜ್ಯ ಬೆಳೆಗಳಿಗೆ ಹವಾಮಾನ ಆಧರಿತ ಬೆಳೆ ವಿಮೆ ದೊರೆಯುತ್ತಿದ್ದು, ಈ ವರ್ಷ ಎರಡು ತಿಂಗಳು ತಡವಾಗಿ ಅರ್ಜಿ ಹಾಕಲು ಅವಕಾಶ ನೀಡಲಾಗಿತ್ತು. ಇದೀಗ ಈ ಎರಡು ವಿಮೆಗಳಿಗೆ ಬೆಳೆ ಸಮೀಕ್ಷೆ ಆ್ಯಪ್’ನಲ್ಲಿ ಕಡ್ಡಾಯಗೊಳಿಸಿ ಪಹಣಿ ನಮೂದು ಮಾಡಬೇಕು ಎಂದು ಆದೇಶವಾಗಿರುವುದು ಕೃಷಿಕರಿಗೆ ಸಮಸ್ಯೆಯಾಗಿದೆ.
ಸರಕಾರ ನಿಗದಿ ಪಡಿಸಿದ ರೈತರ ಆ್ಯಪ್ ಹಾಗೂ ಖಾಸಗಿ ಆ್ಯಪ್’ನಲ್ಲಿ ರೈತರಿಗೆ ಮಾಹಿತಿ ಕೊರತೆ ಹಾಗೂ ಸರ್ವರ್ ಸಮಸ್ಯೆಯಿಂದಾಗಿ ಪುತ್ತೂರು ತಾಲೂಕಿನಲ್ಲಿ ಪ್ರಸ್ತುತ ಶೇ. 40 ಸಮೀಕ್ಷೆ ಆಗಿದೆ. ಕರ್ನಾಟಕದಲ್ಲಿ ಸುಮಾರು 20,000 ಜನ ಬೆಳೆ ವಿಮೆ ಸಮೀಕ್ಷೆಗಾರರೆಂದು ಇವರಿಗೆ ಆರ್.ಟಿ.ಸಿ. ಪಹಣಿಗೆ ಒಂದರಂತೆ 10 ರೂ. ನಿಗದಿ ಮಾಡಿದ್ದು, ಅದೂ ಪಾವತಿಯಾಗದೆ ಉತ್ಸಾಹ ತೋರಿಸುತ್ತಿಲ್ಲ. ಆದ್ದರಿಂದ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಸಚಿವರು, ಮುಖ್ಯಮಂತ್ರಿಗಳ ಮೂಲಕ ಬೆಳೆ ಸಮೀಕ್ಷೆಯನ್ನು ಒಂದು ತಿಂಗಳು ಮುಂದುವರಿಸುವ ಅಗತ್ಯವಿದೆ. ಇದರಿಂದ ಎಲ್ಲಾ ಕೃಷಿಕರು ಬೆಳೆ ಸಮೀಕ್ಷೆ ಆ್ಯಪ್’ನಲ್ಲಿ ನೊಂದಾಯಿಸಿಕೊಳ್ಳಲು ಅವಕಾಶ ಮಾಡಿ ಕೊಟ್ಟಂತಾಗುತ್ತದೆ ಎಂದು ಅವರು ಮನವಿಯಲ್ಲಿ ವಿನಂತಿಸಿದ್ದಾರೆ.