ಪುತ್ತೂರಿನ ಪ್ರಜ್ಞಾ ಆಶ್ರಮದ ವಿಶೇಷ ಚೇತನರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ರಮಾನಾಥ ರೈ

ಪುತ್ತೂರು: ಮಾಜಿ ಸಚಿವ ಬಿ. ರಮಾನಾಥ ರೈ ಅವರು ತಮ್ಮ 72ನೇ ಹುಟ್ಟು ಹಬ್ಬವನ್ನು ಪುತ್ತೂರಿನ ಬಿರುಮಲೆ ಬೆಟ್ಟದಲ್ಲಿರುವ ಪ್ರಜ್ಞಾ ಆಶ್ರಮದಲ್ಲಿ ಆಚರಿಸಿಕೊಂಡರು.

ಆಶ್ರಮದಲ್ಲಿನ ವಿಶೇಷ ಚೇತನರೊಂದಿಗೆ ಸಹಭೋಜನ ನಡೆಸಿ ತನ್ನ ಹುಟ್ಟುಹಬ್ಬ ಆಚರಿಸಿದ ರಮಾನಾಥ ರೈ ಅವರು, ನನ್ನ ರಾಜಕೀಯ ಬದುಕಿನಲ್ಲಿ ಹಲವಾರು ಏಳು ಬೀಳುಗಳನ್ನು ಕಂಡಿದ್ದೇನೆ. ಅವೆಲ್ಲವನ್ನು ಸಮಾನವಾಗಿ ಸ್ವೀಕರಿಸುತ್ತಾ ಬಂದಿದ್ದೇನೆ. ಇಲ್ಲಿನ ಜನರು ನನಗೆ ನೀಡಿರುವ ಪ್ರೀತಿಗೆ ಬೆಲೆ ಕಟ್ಟಲಾಗದು ಎಂದರು.

ಸಾರ್ವಜನಿಕ ಬದುಕಿನಲ್ಲಿ ಪ್ರೀತಿ ವಿಶ್ವಾಸ ಹಂಚಿಕೊಳ್ಳುವುದು ಸಹಜ. ಪ್ರೀತಿಯ ಸಂಬಂಧಗಳು ಎಲ್ಲಕ್ಕೂ ಮಿಗಿಲಾಗಿದೆ. ಅತಿ ಸಣ್ಣ ಪ್ರಾಯದಲ್ಲಿ ರಾಜಕೀಯ ಪ್ರವೇಶ ಮಾಡಿರುವ ನನಗೆ, ಕಾಂಗ್ರೆಸ್ ಪಕ್ಷವು ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ 9 ಬಾರಿ ಸ್ಪರ್ಧಿಸಲು ಅವಕಾಶ ನೀಡಿದೆ. ಅಲ್ಲದೆ ಸರ್ಕಾರದಲ್ಲಿ ಮಂತ್ರಿಯನ್ನಾಗಿಯೂ ಮಾಡಿದೆ. ಈ ನಡುವೆ ಸೋಲು – ಗೆಲುವು ಪಡೆದುಕೊಂಡಿದ್ದು, ಇವೆರಡನ್ನೂ ಸಮಾನವಾಗಿ ಸ್ವೀಕರಿಸಿದ್ದೇನೆ. ಸೋಲಿನಿಂದ ಕುಗ್ಗದೆ ನಿರಂತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಕಾಂಗ್ರೆಸ್ ಪಕ್ಷವು ನನ್ನ ಧರ್ಮವಾಗಿದೆ. ಅದನ್ನು ಎಂದಿಗೂ ಬಿಡಲಾರೆ. ಆ ಧರ್ಮದ ಎಲ್ಲರೂ ಪಕ್ಷದ ಗೆಲುವಿಗೆ ಒಟ್ಟಾಗಿ ಶ್ರಮಿಸಬೇಕು ಎಂದ ಅವರು, ನಾನು ಸಾರಿಗೆ ಸಚಿವನಾಗಿದ್ದಾಗ ಪುತ್ತೂರಿಗೆ ಕೆಎಸ್ಸಾರ್ಟಿಸಿ ಡಿಪೋ ತಂದಿದ್ದೆ. ಅರಣ್ಯ ಸಚಿವನಾಗಿದ್ದಾಗ ಬೀರಮಲೆ ಬೆಟ್ಟದಲ್ಲಿ ಸಾಲು ಮರದ ತಿಮ್ಮಕ್ಕ ಪಾರ್ಕ್ ನಿರ್ಮಿಸಿದ್ದೇನೆ ಎಂದು ನೆನಪಿಸಿಕೊಂಡರು.































 
 

ಈ ಸಂದರ್ಭದಲ್ಲಿ ರಮಾನಾಥ ರೈ ಅವರ ಹುಟ್ಟು ಹಬ್ಬದ ಅಂಗವಾಗಿ ಪಕ್ಷದ ಕಾರ್ಯಕರ್ತ ರೋಶನ್ ರೈ ಬನ್ನೂರು ಅವರ ನೇತೃತ್ವದಲ್ಲಿ ಪ್ರಜ್ಞಾ ಆಶ್ರಮದಲ್ಲಿ ನೂತನವಾಗಿ ಅಳವಡಿಸಲಾಗಿದ್ದ ರೂ. 50 ಸಾವಿರ ವೆಚ್ಚದ ಇಂಟರ್‌ಲಾಕ್‌ ಅನ್ನು ರಮಾನಾಥ ರೈ ಅವರು ಉದ್ಘಾಟಿಸಿದರು. ಅಲ್ಲದೇ, ಆಶ್ರಮದಲ್ಲಿರುವ ವಿಶೇಷ ಚೇತನರಿಗೆ ಹೊಸ ಬಟ್ಟೆ ವಿತರಿಸಿದರು.

ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಂ ಶುಭ ಹಾರೈಸಿದರು.

ಕೆಪಿಸಿಸಿ ಸದಸ್ಯರಾದ ಎಂ.ಎಸ್. ಮಹಮ್ಮದ್, ಡಾ. ರಘು ಬೆಳ್ಳಿಪ್ಪಾಡಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರೋಶನ್ ರೈ ಬನ್ನೂರು ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾ ಸಂಚಾಲಕ ಕೃಷ್ಣಪ್ರಸಾದ್ ಆಳ್ವ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್. ಮಹಮ್ಮದ್ ಆಲಿ ವಂದಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top