ಬೆಂಗಳೂರು: ಚೈತ್ರಾ ಕುಂದಾಪುರ ಬಂಧನ ರಾಜ್ಯ ರಾಜಕೀಯದ ಹಲವು ವಿಚಾರಗಳತ್ತ ಕೈತೋರಿಸುವಂತಿದೆ. ರಾಜ್ಯದ ಸುದ್ದಿ ವಾಹಿನಿಗಳು ಇಡೀ ದಿನ ಚೈತ್ರಾ ಪ್ರಕರಣದ ಬೆನ್ನಿಗೆ ಬಿದ್ದಿದ್ದು, ಹೊಸ ಹೊಸ ವಿಚಾರಗಳು ಹೊರ ಬರತೊಡಗಿವೆ. ಇದೆಲ್ಲದರ ನಡುವೆ ಚೈತ್ರಾ ಕುಂದಾಪುರ ಅವರ ಕೌಟುಂಭಿಕ ಹಿನ್ನೆಲೆಯೂ ಕುತೂಹಲದ ಕೇಂದ್ರ ಬಿಂದುವಾಗಿದೆ.
ಬಡತನದ ಕುಟುಂಬದ ಹಿನ್ನೆಲೆಯಿರುವ ಚೈತ್ರಾ ಅವರ ತಂದೆ ಹಾಗೂ ತಾಯಿ, ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಹೈನುಗಾರಿಕೆ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಈ ಬಡತನದಿಂದ ಹೊರಬಂದು, ಕೋಟ್ಯಧಿಪತಿಯಾಗುವ ಕನಸು ಕಂಡರೇ ಎನ್ನುವ ಪ್ರಶ್ನೆಯೂ ಸಾಮಾಜಿಕ ವಲಯದಲ್ಲಿ ಹರಿದಾಡುತ್ತಿದೆ. ಈ ಹಿಂದೆ ಮಾಧ್ಯಮದಲ್ಲಿಯೂ ಕೆಲಸ ಮಾಡಿಕೊಂಡಿದ್ದ ಚೈತ್ರಾ, ಬಳಿಕ ಹಿಂದೂ ಪರ ಸಂಘಟನೆಗಳಲ್ಲಿ ಗುರುತಿಸಿಕೊಂಡರು. ಕಾಲೇಜು ದಿನಗಳಲ್ಲಿಯೇ ಎಬಿವಿಪಿ ಕಾರ್ಯಕರ್ತೆಯಾಗಿ ಕೆಲಸ ಮಾಡಿದ್ದರೂ, ಮುಂದೆ ಇದನ್ನೇ ವೃತ್ತಿಯಾಗಿಸಿದರೇ ಎನ್ನುವ ವಿಶ್ಲೇಷಣೆಗಳು ಕೇಳಿಬರುತ್ತಿವೆ.
ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಚೈತ್ರಾ, ತನ್ನ ಭಾಷಣದಿಂದಲೇ ಗುರುತಿಸಿಕೊಂಡಿದ್ದರು. ಹಲವರ ಕೆಂಗಣ್ಣಿಗೂ ಗುರಿಯಾಗಿದ್ದರು.
ಬುಧವಾರ ಸಂಜೆ ವೇಳೆಗೆ ಚೈತ್ರಾ ಅವರನ್ನು ಸಿಸಿಬಿ ಪೊಲೀಸರ ವಶಕ್ಕೆ ನೀಡಿ, ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್ ನ್ಯಾಯಾಲಯ ಆದೇಶ ನೀಡಿದೆ. ಈ ನಡುವೆ ಅಂದರೆ ಗುರುವಾರ ಬೆಳಿಗ್ಗೆ ಪೊಲೀಸರು ಚೈತ್ರಾ ಅವರನ್ನು ಕರೆದೊಯ್ಯುತ್ತಿದ್ದ ವೇಳೆ, ಮಾಧ್ಯಮದತ್ತ ತಿರುಗಿ – ಈ ಪ್ರಕರಣದಲ್ಲಿ ದೊಡ್ಡ ದೊಡ್ಡವರು ಇದ್ದಾರೆ. ಸ್ವಾಮೀಜಿ ಬಂಧನವಾದರೆ ಸತ್ಯ ಹೊರಬರುತ್ತದೆ. ಬಿಲ್ ಪೆಂಡಿಂಗ್ ಆಗಿರುವುದಕ್ಕೆ ಈ ಷಡ್ಯಂತ್ರ ಎಂಬ ಹೇಳಿಕೆ ನೀಡಿರುವುದು ಒಟ್ಟು ಪ್ರಕರಣ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆಯನ್ನು ಪುಷ್ಟೀಕರಿಸಿದೆ.
ರಾಜಕೀಯ ಪ್ರಮುಖರ, ಅಧಿಕಾರಿಗಳ ಹೇಳಿಕೆಗಳು:
ಚೈತ್ರಾ ಕುಂದಾಪುರ ಪ್ರಕರಣ ಮೊದಲಿಗೆ ಸುದ್ದಿಯಾಗಿದ್ದು, ಬಿಜೆಪಿ ಟಿಕೇಟ್ ಕೊಡಿಸುವ ವಿಚಾರದಲ್ಲಿ. ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು, ಚೈತ್ರಾ ಪ್ರಕರಣಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.
ಇಂದಿರಾ ಕ್ಯಾಂಟೀನ್, ಬಿಲ್ ಪೆಂಡಿಂಗ್ ಕುರಿತಾಗಿ ಗೃಹ ಸಚಿವ ಪರಮೇಶ್ವರ್ ಹೇಳಿಕೆ ನೀಡುತ್ತಾ, – ಹಿಂದೂ ಪರ ಸಂಘಟನೆಗಳ ಆರೋಪಕ್ಕೂ ಕಾಂಗ್ರೆಸಿಗೂ ಸಂಬಂಧವಿಲ್ಲ. ಬಿಜೆಪಿ ಟಿಕೇಟ್ ವಿಚಾರದಲ್ಲಿ ಹಣ ಪಡೆದಿದ್ದಾರೆ ಎಂಬ ಆರೋಪವಿದ್ದು, ತನಿಖೆ ನಡೆಯುತ್ತಿದೆ. ತಪ್ಪಿದ್ದರೆ ಸ್ವಾಮೀಜಿಯ ಬಂಧನವೂ ಆಗಲಿದೆ. ಪೊಲೀಸರು ಸುವೋ ಮೋಟೋ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ತಿಳಿಸಿದ್ದಾರೆ.
ಇಂದಿರಾ ಕ್ಯಾಂಟೀನ್, ಬಿಲ್ ಪೆಂಡಿಂಗ್ ವಿಚಾರದಲ್ಲಿ ಹಿರಿಯ ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್ ಪ್ರತಿಕ್ರಿಯಿಸಿ, ಯಾವುದೇ ಬಿಲ್ ಪೆಂಡಿಂಗ್ ಆಗಿಲ್ಲ ಎಂದಿದ್ದಾರೆ.