ಮಾಣಿ: ಪಾಂಡವರು ತಮ್ಮ ಅಜ್ಞಾತವಾಸದ ಸಮಯದಲ್ಲಿ ತಂಗಿದ್ದರು ಎಂದು ನಂಬಲಾಗಿರುವ ಇತಿಹಾಸ ಪ್ರಸಿದ್ಧ ಅನಂತಾಡಿ ಸಮೀಪದ ಸುಳ್ಳಮಲೆ – ಬಲ್ಲಮಲೆಯಲ್ಲಿ ಸೆ. 15ರಿಂದ ಸೆ. 19ರವರೆಗೆ ಗುಹಾ ತೀರ್ಥ ಸ್ನಾನ ನಡೆಯಲಿದೆ.
ಸೋಣ ಅಮಾವಾಸ್ಯೆಯಂದು ಗುಹಾ ತೀರ್ಥ ಸ್ನಾನಕ್ಕೆ ಸಂಪ್ರದಾಯ ಪ್ರಕಾರ ಕೇರ್ಪು (ಬಿದಿರಿನ ಏಣಿ) ಇಡುವ ಮೂಲಕ ಗುಹಾ ತೀರ್ಥಸ್ನಾನಕ್ಕೆ ಚಾಲನೆ ದೊರಕಲಿದೆ. ಶುಕ್ಲ ಪಕ್ಷದ ಚೌತಿಯವರೆಗೆ ಅಂದರೆ ಸೆ. 19ರವರೆಗೆ ತೀರ್ಥ ಸ್ನಾನಕ್ಕೆ ಇಲ್ಲಿ ಮುಕ್ತ ಅವಕಾಶ ಕಲ್ಪಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅನಂತಾಡಿಯ ಸಮೀಪದ ಸುಳ್ಳಮಲೆ –ಬಲ್ಲಮಲೆಯ ಗುಹಾಲಯಕ್ಕೆ ವರ್ಷದಲ್ಲಿ ಈ ನಾಲ್ಕು ದಿನ ಮಾತ್ರ ಅವಕಾಶ. ಪಾಂಡವರು ತಮ್ಮ ಅಜ್ಞಾತವಾಸದ ಸಮಯದಲ್ಲಿ ಇಲ್ಲಿ ಕೆಲಕಾಲ ನೆಲೆಸಿದ್ದರು ಎಂಬ ಇತಿಹಾಸವೂ ಇದೆ.
ಶ್ರಾವಣ ಅಮಾವಾಸ್ಯೆಯಿಂದ ಭಾದ್ರಪದ ಚೌತಿಯವರೆಗಿನ ಸಮಯದಲ್ಲಿ ಇಲ್ಲಿ ತೀರ್ಥಸ್ನಾನ ಮಾಡಿದರೆ ಜೀವನ ಪಾವನವಾಗುತ್ತದೆ ಎನ್ನುವ ನಂಬಿಕೆ ಇದೆ. ಈ ತೀರ್ಥ ಸ್ನಾನ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಚರ್ಮರೋಗಗಳು ನಿವಾರಣೆಯಾಗುತ್ತವೆ ಎನ್ನಲಾಗುತ್ತದೆ.