ಮಂಗಳೂರು: ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆಗೆ ಒತ್ತಾಯಿಸಿ ಜಿಲ್ಲಾ ಹೋರಾಟ ಸಮಿತಿ ವತಿಯಿಂದ ಮಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ಬುಧವಾರ ಎರಡನೇ ದಿನಕ್ಕೆ ಕಾಲಿಟ್ಟಿತು.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಸರ್ಕಾರದ ವಿರುದ್ಧ, ವ್ಯವಸ್ಥೆಯ ವಿರುದ್ಧ ಜನರು ತಿರುಗಿ ಬೀಳುವಂತಾಗಿದೆ. ಇಂತಹ ಒಂದು ಹೋರಾಟವನ್ನು ಮಹೇಶ್ ಶೆಟ್ಟಿ ತಿಮರೋಡಿ ಅವರು ಸಂಘಟಿಸಿದ್ದಾರೆ. ನ್ಯಾಯಪರವಾದ ಇಂತಹ ಹೋರಾಟವನ್ನು ವಿರೋಧಿಸುವುದು ಎಷ್ಟು ಸರಿ? ಅಪರಾಧಿ ಯಾರೆಂದು ತಿಳಿಯಬೇಕು ತಾನೇ? ಪ್ರಜಾಪ್ರಭುತ್ವದಲ್ಲಿ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಕೊಡುವ ಕೆಲಸವನ್ನು ಸರ್ಕಾರ ಮಾಡಬೇಕಲ್ಲವೇ? ನಮ್ಮ ಮನೆಯ ಮಗಳ ಹತ್ಯೆಯನ್ನು ಖಂಡಿಸಲು, ನ್ಯಾಯ ನೀಡಿ ಎಂದು ಆಗ್ರಹಿಸಿ ರಸ್ತೆಗಿಳಿಯುವ ಅನಿವಾರ್ಯತೆ ಬಂದೊದಗಿದೆ ಎಂದರು.
ಹೋರಾಟದ ಕಾವು ತಗ್ಗಿಸಲು ಸಂಘಟನೆಗಳಿಗೆ ಹಣ ಪೂರೈಕೆ: ಪ್ರವೀಣ್ ಕುಂಟ್ಯಾನ
ಜಿಲ್ಲಾ ಹೋರಾಟ ಸಮಿತಿಯ ಪ್ರವೀಣ್ ಕುಂಟ್ಯಾನ ಮಾತನಾಡಿ, ಸೌಜನ್ಯ ಕೊಲೆ ನಡೆದ ಬಳಿಕ ಹೋರಾಟದ ಕಾವನ್ನು ತಗ್ಗಿಸಲು ಜಾತಿ ಸಂಘಟನೆಗಳಿಗೆ ಹಣ ನೀಡಲಾಗುತ್ತಿತ್ತು. ಸೌಜನ್ಯ ಕೊಲೆಗೂ ಧರ್ಮಸ್ಥಳದ ಕೆಲ ವ್ಯಕ್ತಿಗಳಿಗೆ ಯಾವುದೇ ಸಂಬಂಧವಿಲ್ಲದಿದ್ದರೆ ಹಣ ನೀಡುವ ವ್ಯವಸ್ಥೆ ಯಾಕೆ ಎಂದು ಪ್ರಶ್ನಿಸಿದ ಅವರು, ಈ ವಿಚಾರದಿಂದ ಮತ್ತಷ್ಟು ಅನುಮಾನ, ಗೊಂದಲ ಉದ್ಭವಿಸಿದೆ ಎಂದು ಆಪಾದಿಸಿದರು. ಆದ್ದರಿಂದ ಧರ್ಮಸ್ಥಳದಿಂದ ಯಾವುದಕ್ಕೆಲ್ಲಾ ಹಣ ನೀಡಲಾಗುತ್ತಿದೆ ಎನ್ನುವುದರ ಕುರಿತು ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಸೌಜನ್ಯ ಪರವಾಗಿ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದೂರುವ ಕೆಲಸ ಮಾಡಲಾಗುತ್ತಿದೆ. ಗ್ರಾಮಾಭಿವೃದ್ಧಿ ಯೋಜನೆಯ ಕೆಲ ಅಧಿಕಾರಿಗಳು ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದೂರುತ್ತಿದ್ದರೆ, ಧರ್ಮಸ್ಥಳವನ್ನು ಹೊಗಳುತ್ತಿದ್ದಾರೆ. ಅವರುಗಳು ಸೌಜನ್ಯ ಕೊಲೆ ಪ್ರಕರಣದಲ್ಲಿ ಮೂಗು ತೂರಿಸುವ ಕೆಲಸ ಯಾಕೆ? ಎಲ್ಲರೂ ಒಟ್ಟಾಗಿ ಪ್ರತಿಭಟನೆಯಲ್ಲಿ ತೊಡಗಿಕೊಂಡರೆ ಸೌಜನ್ಯಳಿಗೆ ನ್ಯಾಯ ಸಿಗುತ್ತದೆ. ಆದ್ದರಿಂದ ಎಲ್ಲರೂ ಒಗ್ಗಟ್ಟಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಇದೇ ಸಂದರ್ಭ ಜಿಲ್ಲಾಧಿಕಾರಿಗಳ ಪರವಾಗಿ ಅಧಿಕಾರಿಗಳಿಗೆ ಮನವಿ ನೀಡಲಾಯಿತು.
ಪ್ರತಿಭಟನೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಸೌಜನ್ಯ ಅವರ ತಾಯಿ ಕುಸುಮಾವತಿ, ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಚಿದಾನಂದ ಬೈಲಾಡಿ, ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಕೆಯ್ಯೂರು ಜಿಲ್ಲಾ ಹೋರಾಟ ಸಮಿತಿಯ ಸಂಚಾಲಕ ಡಿ.ಬಿ. ಬಾಲಕೃಷ್ಣ, ಕಾರ್ಯದರ್ಶಿ ರಕ್ಷಿತ್ ಪುತ್ತಿಲ, ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲೆಯ ಎಲ್ಲಾ ತಾಲೂಕು ಸಮಿತಿಯ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.