ಉಪ್ಪಿನಂಗಡಿ: ಸಂಪಾದನೆಯ ನಿರ್ದಿಷ್ಟ ಭಾಗವನ್ನು ಸಮಾಜ ಸೇವಾ ಕಾರ್ಯಗಳಿಗೆ ವಿನಿಯೋಗಿಸಿ ಸಮಸ್ಯೆಗಳಿಗೆ ಸ್ಪಂದಿಸುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದು ನಿವೃತ್ತ ಬಿಎಸ್ಎಫ್ ಕಮಾಂಡೆಂಟ್ ಡಿ. ಚಂದಪ್ಪ ಮೂಲ್ಯ ತಿಳಿಸಿದರು.
ಉಪ್ಪಿನಂಗಡಿ ರಾಮನಗರದ ಶ್ರೀ ಶಾರದಾ ಕಲಾ ಮಂಟಪದಲ್ಲಿ ಜರಗಿದ ಬಂಟ್ವಾಳ ಮೆಲ್ಕಾರ್ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಕೇಂದ್ರ ಸಮಿತಿ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸೇನಾ ಪಡೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಕೆಲವು ರೋಚಕ ಘಟನೆಗಳ ಕುರಿತ ಮಾಹಿತಿಯನ್ನು ಅವರು ನೀಡಿದರು.
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಮಾಜಿ ಸದಸ್ಯ ಜಿ. ಕೃ ಷ್ಣರಾವ್ ಅರ್ತಿಲ ಕಾರ್ಯಕರ್ಮ ಉದ್ಘಾಟಿಸಿ, ಹಿರಿಯರು ಸಕ್ರಿಯರಾಗಿರುವಂತೆ ಮಾಡುವಲ್ಲಿ ಪ್ರತಿಷ್ಠಾನವು ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಪ್ರತಿಷ್ಠಾನದ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ಅಧ್ಯಕ್ಷತೆ ವಹಿಸಿ ಪ್ರತಿಷ್ಠಾನದ ಕಾರ್ಯಗಳ ಅವಲೋಕನ ಮಾಡಿ ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದರು.
ವೇದಿಕೆಯಲ್ಲಿ ಪ್ರತಿಷ್ಠಾನದ ಉಪಾಧ್ಯಕ್ಷ ಜಯರಾಮ ಭಂಡಾರಿ ಧರ್ಮಸ್ಥಳ, ಯಕ್ಷಗಾನ ಕಲಾವಿದ ಪಾತಾಳ ಅಂಬಾ ಪ್ರಸಾದ್, ಪ್ರತಿಷ್ಠಾನದ ಪುತ್ತೂರು ಘಟಕದ ಸಂಚಾಲಕ ಉಮೇಶ್ ಶೆಣೈ ನಂದಾವರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಿರಿಯರು ಪಡೆಯುವ ಸೌಲಭ್ಯಗಳಾದ ಆರೋಗ್ಯ, ರೈಲ್ವೇ ಪ್ರಯಾಣ, ಕೃಷಿ ವಿಮಾ ಯೋಜನೆ, ಸುರಕ್ಷತೆಯ ಬಗ್ಗೆ ಕಾನೂನು ಮಾಹಿತಿಯನ್ನು ವಿವಿಧ ತಾಲೂಕು ಘಟಕಗಳ ಪದಾಧಿಕಾರಿಗಳಾದ ಭವಾನಿ ಶಂಕರ ಶೆಟ್ಟಿ ಪುತ್ತೂರು, ಸೀತಾರಾಮ ಶೆಟ್ಟಿ ಕಾಂತಡಿ ಗುತ್ತು, ಕೆದಿಮಾರು ಶಂಕರ ಭಟ್, ಚಂದ್ರಶೇಖರ ಆಳ್ವ ಪಡುಮಲೆ, ಕೃಷ್ಣಶರ್ಮ ಆನಾರು, ಮಹಾಲಿಂಗೇಶ್ವರ ಭಟ್ ಪೆರಿಯಡ್ಕ, ಗೋಪಾಲ ಶೆಟ್ಟಿ ಕಳೆಂಜ, ಸುರೇಶ ರಾವ್ ಬನ್ನೆಂಗಳ ನೀಡಿದರು.
ರಾಮಕೃಷ್ಣ ನಾಯಕ್ ಮಂಚಿ ಪ್ರಾರ್ಥಿಸಿದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಸ್ವಾಗತಿಸಿ, ಉಪಾಧ್ಯಕ್ಷ ದುಗ್ಗಪ್ಪ .ಯನ್ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ಲೋಕೇಶ್ ಹೆಗ್ಡೆ ವಂದಿಸಿದರು.