ಪುತ್ತೂರು: ಶಾಲೆಗೆ ಮಕ್ಕಳನ್ನು ಕಳುಹಿಸಿದ ಮಾತ್ರಕ್ಕೆ ಪೋಷಕರ ಜವಾಬ್ದಾರಿ ಕೊನೆಗೊಳ್ಳುವುದಿಲ್ಲ. ಮಕ್ಕಳ ಕಲಿಕೆಯಲ್ಲಿ ಶಿಕ್ಷಕರಷ್ಟೇ ಜವಾಬ್ದಾರಿ ಪೋಷಕರಿಗೂ ಇದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ನೆಟ್ಟಣಿಗೆ ಮುಡ್ನೂರು ಗ್ರಾಮದ ಮೇನಾಲ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ವಿವೇಕ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು.
ನಾವು ಮಕ್ಕಳಿಗಾಗಿ ಎಲ್ಲವನ್ನೂ ತ್ಯಾಗ ಮಾಡುತ್ತೇವೆ, ಸಹಿಸಿಕೊಳ್ಳುತ್ತೇವೆ. ಆದರೆ ಅವರ ವಿದ್ಯಾಭ್ಯಾಸದ ಕಡೆ ಗಮನಕೊಡುವುದರಲ್ಲಿ ಸ್ವಲ್ಪ ಹಿಂದೆ ಇದ್ದೇವೆ. ಶಾಲೆಗೆ ಹೋದ ಮಗು ಕಲಿಯುತ್ತಿದೆಯೇ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಶಾಲೆಗೆ ಭೇಟಿ ಮಾಡಿ ಮಕ್ಕಳ ಬಗ್ಗೆ ಶಿಕ್ಷಕರ ಮೂಲಕ ಅರಿತುಕೊಳ್ಳುವ ಕೆಲಸವನ್ನು ಪೋಷಕರು ಮಾಡಬೇಕು ಎಂದು ಹೇಳಿದರು.
ಜಿ.ಪಂ. ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಮಾತನಾಡಿ, ಮಕ್ಕಳಿಗೆ ಎಳೆಯ ಪ್ರಾಯದಲ್ಲೇ ಶಿಸ್ತು ಕಲಿಸಬೇಕು. ಮಕ್ಕಳು ಶಾಲೆಯಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಶಿಸ್ತು ಶಾಲೆಯಿಂದಲೇ ಆರಂಭಗೊಳ್ಳಬೇಕು. ಈ ನಿಟ್ಟಿನಲ್ಲಿ ಹೆಚ್ಚು ಮುತುವರ್ಜಿ ವಹಿಸಬೇಕು ಎಂದರು.
ಉಪಾಧ್ಯಕ್ಷ ರಾಮ ಶುಭ ಹಾರೈಸಿದರು. ಶಾಲೆಯ ನೂತನ ಶೌಚಾಲಯವನ್ನು ಗ್ರಾಪಂ ಅಧ್ಯಕ್ಷೆ ಫೌಝಿಯಾ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭ ಶಾಸಕ ಅಶೋಕ್ ರೈ , ಗ್ರಾಪಂ ಅಧ್ಯಕ್ಷೆ ಫೌಜಿಯಾ, ಉಪಾಧ್ಯಕ್ಷ ರಾಮ ಅವರನ್ನು ಸನ್ಮಾನಿಸಲಾಯಿತು.
ಶಾಲಾ ಎಸ್ಡಿಎಂಸಿ ಅಧ್ಯಕ್ಷ ಅಬ್ದುಲ್ಲ ಮೆಣಸಿನಕಾನ, ಗ್ರಾಪಂ ನಿಕಟ ಪೂರ್ವ ಅಧ್ಯಕ್ಷ ರಮೇಶ್ ರೈ ಸಾಂತ್ಯ, ಸದಸ್ಯರಾದ ಶ್ರೀರಾಂ ಪಕ್ಕಳ, ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಎಸ್ಡಿಎಂಸಿ ಉಪಾಧ್ಯಕ್ಷೆ ಮನೋರಮಾ, ಡಿಸಿಸಿ ಸದಸ್ಯೆ ಅಸ್ಮಾ ಗಟ್ಟಮನೆ, ಎಸ್ಡಿಎಂಸಿ ಸದಸ್ಯರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.