ಹೊಸದಿಲ್ಲಿ: ಜಿ20 ಶೃಂಗಸಭೆಯ ಸಂದರ್ಭದಲ್ಲಿ ಕಳೆದ ಗುರುವಾರ ಪ್ರಮುಖ ವಿಷಯಗಳ ಬಗ್ಗೆ ಒಮ್ಮತ ಸಾಧಿಸಲು ಭಾರತ ಶಕ್ತವಾಗುತ್ತದೆಯೇ ಎಂಬ ಕುತೂಹಲ ಎಲ್ಲೆಡೆ ಮೂಡಿದ್ದರೆ, ಪಂಚತಾರಾ ಹೋಟೆಲ್ ಒಂದರಲ್ಲಿ ಕಂಡುಬಂದ ನಿಗೂಢ ಬ್ಯಾಗ್ ಭದ್ರತಾ ಪಡೆಗಳ ನಿದ್ದೆಗೆಡಿಸಿ ಹನ್ನೆರಡು ಗಂಟೆಗಳ ಕಾಲ ಭೀತಿಯ ವಾತಾವರಣ ನಿರ್ಮಾಣಕ್ಕೆ ಕಾರಣವಾಯಿತು.
ಚೀನಾ ನಿಯೋಗ ಉಳಿದುಕೊಂಡಿದ್ದ ತಾಜ್ ಪ್ಯಾಲೇಸ್ ಹೋಟೆಲ್ ನಲ್ಲಿ ಅಸಹಜ ರೂಪದ ಬ್ಯಾಗ್ ಭದ್ರತಾ ಸಿಬ್ಬಂದಿಯ ಗಮನ ಸೆಳೆಯಿತು. ಆಗ ಒಂದು ರೀತಿಯ ಆತಂಕದ ವಾತಾವರಣ ಸೃಷ್ಟಿಯಾಯಿತು. ರಾಜತಾಂತ್ರಿಕ ಸಿಬ್ಬಂದಿ ಬ್ಯಾಗೇಜ್ ಗಳ ವ್ಯವಸ್ಥೆ ಮಾಡಲು ಸೂಚಿಸಿದಾಗ, ಈ ಬ್ಯಾಗ್ ನ ಗಾತ್ರ ತೀರಾ ವಿಚಿತ್ರವಾಗಿದ್ದುದು ಗಮನ ಸೆಳೆಯಿತು. ಆದರೂ ರಾಜತಾಂತ್ರಿಕ ಶಿಷ್ಟಾಚಾರದ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿ ಬ್ಯಾಗ್ ಒಳಕ್ಕೆ ಒಯ್ಯಲು ಅನುಮತಿ ನೀಡಿದರು.
ಕೊಠಡಿಗೆ ಹೋದ ಬಳಿಕ ಭದ್ರತಾ ಸಿಬ್ಬಂದಿಯೊಬ್ಬರು, ಅನುಮಾನಾಸ್ಪದ ಸಾಧನ ಬ್ಯಾಗ್ ನಲ್ಲಿ ಇದೆ ಎನ್ನುವುದನ್ನು ಗಮನಕ್ಕೆ ತಂದರು ಹಾಗೂ ಮೇಲಾಧಿಕಾರಿಗಳ ಬಳಿ ತಲುಪಿತು. ಬ್ಯಾಗ್ ಸ್ಕ್ಯಾನ್ ಮಾಡುವಂತೆ ಮೇಲಾಧಿಕಾರಿಗಳ ಸೂಚನೆ ಬಂತು. ಆದರೆ ಇದಕೆ ಚೀನಿ ಅಧಿಕಾರಿಗಳು ಬ್ಯಾಗ್ ಸ್ಕ್ಯಾನ್ ಗೆ ಒಳಪಡಿಸಲು ಹಾಗೂ ಅದರ ವಸ್ತುಗಳ ತಪಾಸಣೆಗೆ ನಿರಾಕರಿಸಿದ್ದು, ಉದ್ವಿಗ್ನತೆ ಹೆಚ್ಚಲು ಕಾರಣವಾಯಿತು.
ಚೀನಾ ನಿಯೋಗ ಪ್ರತ್ಯೇಕ ಹಾಗ ಖಾಸಗಿ ಇಂಟರ್ನೆಟ್ ಸಂಪರ್ಕಕ್ಕೆ ಆಗ್ರಹಿಸಿದಾಗ ಹೋಟೆಲ್ ಸಿಬ್ಬಂದಿ ನಿರಾಕರಿಸಿದರು. ಆ ಬಳಿಕ ಈ ಅನುಮಾನಾಸ್ಪದ ಸಾಧನವನ್ನು ಹೋಟೆಲ್ನಿಂದ ತೆರವುಗೊಳಿಸಿ ಚೀನಾದ ರಾಜತಾಂತ್ರಿಕ ಕಾರ್ಯಾಲಯಕ್ಕೆ ಒಯ್ದ ಬಳಿಕ ಅಂದರೆ ಸುಮಾರು 12 ಗಂಟೆಗಳ ಸುಧೀರ್ಘ ನಾಟಕದ ಬಳಿಕ ಪರಿಸ್ಥಿತಿ ತಿಳಿಯಾಯಿತು. ಮುಂದಿನ ಜಿ20 ಶೃಂಗಸಭೆಯ ಆತಿಥ್ಯ ವಹಿಸಿದ್ದ ಬ್ರೆಜಿಲ್ ಅಧ್ಯಕ್ಷರು ಕೂಡ ಇದೇ ಹೋಟೆಲ್ನಲ್ಲಿ ತಂಗಿದ್ದರು. ಇದು ಇಂಟರ್ನೆಟ್ ಸಂವಹನ ಚಾನೆಲ್ ಗಳನ್ನು ತಡೆಯುವ ಸಾಧನ ಇರಬಹುದು ಎಂದು ಭದ್ರತಾ ಅಧಿಕಾರಿಗಳು ಅಂದಾಜಿಸಿದ್ದರೂ, ಸೂಟ್ ಕೇಸ್ ನಲ್ಲಿದ್ದ ವಸ್ತು ಯಾವುದು ಎನ್ನುವುದು ಇನ್ನೂ ನಿಗೂಢವಾಗಿಯೇ ಉಳಿದಿದೆ.