ವಿಶ್ವಕರ್ಮ ಸಮಾಜದ ಧ್ವಜ ಬಿಡುಗಡೆ | ವಿಶ್ವಕರ್ಮನ ಐದು ಮುಖಗಳ ಹೋಲಿಕೆಯ ಧ್ವಜ | ವಿಶ್ವಕರ್ಮ ಮಹೋತ್ಸವದಂದು ಧ್ವಜಾರೋಹಣ ನೆರವೇರಿಸಲು ಕರೆ

ಉಡುಪಿ: ವಿಶ್ವಕರ್ಮ ಸಮಾಜದ ಐಕ್ಯತೆಯ ಮತ್ತು ಸಂಘಟನೆ ಪ್ರತೀಕವಾಗಿ ವಿಶ್ವಕರ್ಮ ಧ್ವಜವು ಮೂಡಿಬರಲಿ ಎಂದು ಆನೆಗುಂದಿ ಮಹಾಸಂಸ್ಥಾನದ ಸರಸ್ವತೀ ಪೀಠಾಧೀಶ್ವರ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು.

ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಶ್ರೀ ಸರಸ್ವತೀ ಸತ್ಸಂಗ ಮಂದಿರದಲ್ಲಿ ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಅವರಿಗೆ ಹಸ್ತಾಂತರಿಸುವುದರ ಮೂಲಕ ವಿಶ್ವಕರ್ಮ ಸಮಾಜದ ಧ್ವಜದ ಬಿಡುಗಡೆ ಮಾಡಿ ಆಶೀರ್ವಚನ ನೀಡಿದರು.

ದೇವಸ್ಥಾನಗಳ ಧರ್ಮದರ್ಶಿಗಳು, ವಿದ್ವಾಂಸರು, ವೈದಿಕ ಮುಖಂಡರು, ವಿವಿಧ ಸಂಘಟನೆಯ ಮುಖಂಡರುಗಳೊಂದಿಗೆ ಸಭೆಗಳಲ್ಲಿ ಒಮ್ಮತ ಅಭಿಪ್ರಾಯದಿಂದ ವಿಶ್ವಕರ್ಮ ಧ್ವಜ ರೂಪುಗೊಂಡಿದೆ. ಇನ್ನಷ್ಟು ಅಭಿಪ್ರಾಯಗಳು ಬಂದಲ್ಲಿ ಸೂಕ್ತವೆನಿಸಿದಲ್ಲಿ ಪರಿಗಣಿಸುವ ಮುಕ್ತ ಅಭಿಪ್ರಾಯವೂ ಧ್ವಜ ಸಮಿತಿಗೆ ಇದೆ ಎಂದು ಅವರು ಹೇಳಿದರು.































 
 

ಇದೀಗ ರಚಿಸಲಾದ ಧ್ವಜವನ್ನು ಮಹಾ ಸಂಸ್ಥಾನದ ಎಲ್ಲ ದೇವಸ್ಥಾನದ ಧರ್ಮದರ್ಶಿಗಳು, ಎಲ್ಲಾ ಸಂಘಟನೆಯ ಮುಖಂಡರುಗಳು ವಿಶ್ವಕರ್ಮ ಮಹೋತ್ಸವದ ದಿನ ಧ್ವಜಾರೋಹಣ ನೆರವೇರಿಸುವ ಮೂಲಕ ಸಾಂಘಿಕ ಶಕ್ತಿ ಪ್ರದರ್ಶನವಾಗಲಿ ಎಂದು ಅವರು ಹಾರೈಸಿದರು.

ಹೀಗಿದೆ ಧ್ವಜ:

ವಿಶ್ವಕರ್ಮ ಧ್ವಜದಲ್ಲಿ ಆರು ಬಣ್ಣಗಳಿವೆ. ಇದರಲ್ಲಿ ಐದು ಬಣ್ಣಗಳು ವಿಶ್ವಕರ್ಮನ ಸಾಕಾರ ರೂಪದ ಐದು ಮುಖಗಳ ಬಣ್ಣವನ್ನು ಹೊಂದಿದೆ. ಐದು ಮುಖಗಳಾದ ಸದ್ಯೋಜಾತ- ಬಿಳಿ, ವಾಮದೇವ- ಕಪ್ಪು, ಅಘೋರ- ಕೆಂಪು, ತತ್ಪುರಷ- ಹಳದಿ , ಈಶಾನ- ಹಸುರು ಹಾಗೂ ಆರನೇ ಬಣ್ಣವು ಶರೀರ- ಹೇಮವರ್ಣ( ಚಿನ್ನದ ಬಣ್ಣ)ವನ್ನು , ಪ್ರಕೃತಿಯ ಪೂರ್ಣ ರೂಪವಾದ ಭೂಮಿಯನ್ನು ಪಂಚಶಕ್ತಿಗಳನ್ನು ಪ್ರತಿನಿಧೀಕರಿಸುತ್ತದೆ. ಭೂಮಿಯ ಮೇಲೆ ಜ್ಞಾನದ ಸಂಕೇತವಾದ ಓಂಕಾರದ ಲಾಂಛನವನ್ನು ಹೊಂದಿದೆ. ಕತ್ತಲೆಯಿಂದ ಬೆಳಕಿನೆಡೆಗೆ ಎನ್ನುವ ಜ್ಞಾನ ಸಂದೇಶವನ್ನೂ ನೀಡುತ್ತದೆ. ವಾಸ್ತು ಪ್ರಕಾರ ಧ್ವಜದಲ್ಲಿದೆ.

ಮಹಾಸಂಸ್ಥಾನದ ಆಸ್ಥಾನ ವಿದ್ವಾಂಸ ವೇ.ಬ್ರ ಶಂಕರಾಚಾರ್ಯ ಕಡ್ಲಾಸ್ಕರ್‌, ಧ್ವಜ ಸಮಿತಿಯ ಸಂಚಾಲಕ ಯೋಗಾಚಾರ್ಯ ಪುಂಡರಿಕಾಕ್ಷ ಬೆಳ್ಳೂರು, ಪ್ರತಿಷ್ಠಾನದ ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ, ಅಸೆಟ್ ಅಧ್ಯಕ್ಷ ಬಿ ಸೂರ್ಯಕುಮಾರ ಹಳೆಯಂಗಡಿ, ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಪಿ.ವಿ ಗಂಗಾಧರ ಆಚಾರ್ಯ ಉಡುಪಿ, ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಪಂಚಾಸಿಂಹಾಸನ ಸರಸ್ವತೀ ಪೀಠ ವಿಕಾಸ ಸಮಿತಿಯ ಗಂಗಾವತಿ ಅದ್ಯಕ್ಷ ದಿನೇಶ್ ಆಚಾರ್ಯ ಪಡುಬಿದ್ರಿ ಸೇರಿದಂಥೆ ಬೆಂಗಳೂರು, ಕೊಯಂಬುತ್ತೂರು, ಮುಂಬೈ, ಉಡುಪಿ, ಮಂಗಳೂರು ಪುತ್ತೂರು ಮುಂತಾದ ಪ್ರದೇಶಗಳ ಮುಖಂಡರು ಉಪಸ್ಥಿತರಿದ್ದರು. ಆನೆಗುಂದಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್‌ ಎಂ.ಬಿ ಆಚಾರ್‌ ಕಂಬಾರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಲೋಲಾಕ್ಷ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top