ಬೆಳ್ತಂಗಡಿ: ಸೌಜನ್ಯ ಪ್ರಕರಣದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿ, ಮನೆಯವರೇ ಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು. ಹೀಗೆ ಮೇಲ್ಮನವಿ ಸಲ್ಲಿಸಲು 4 ದಿನಗಳು ಮಾತ್ರ ಬಾಕಿ ಉಳಿದಿದ್ದು, ದಯಮಾಡಿ ಅರ್ಜಿ ಸಲ್ಲಿಸಿ ಎಂದು ಸೌಜನ್ಯ ಮನೆಗೆ ಭೇಟಿ ನೀಡಿದ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಪ್ರಮುಖರು ವಿನಂತಿಸಿದರು.
ಸೌಜನ್ಯ ಪ್ರಕರಣದ ವಿಚಾರಣೆ ಆಗ್ರಹಿಸಿ, ಗಿರೀಶ ಭಾರದ್ವಾಜ್ , ನವೀನ್ ಕುಮಾರ್ ನೆರಿಯ ಬೆಳ್ತಂಗಡಿ , ವಿನಾಯಕ ಫ್ರೆಂಡ್ಸ್ ಟ್ರಸ್ಟ್ ಬಲ್ನಾಡು ಪುತ್ತೂರು ಒಟ್ಟಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್, ಸರಕಾರ ಅಥವಾ ಮೂಲದೂರುದಾರರು ಅಥವಾ ಸಂತ್ರಸ್ಥ ಕುಟುಂಬ ಮಾತ್ರ ಆರೋಪಿಯನ್ನು ದೋಷಮುಕ್ತಗೊಳಿಸಿದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಾನೂನಿಲ್ಲಿ ಅವಕಾಶವಿದೆ. ಅರ್ಜಿದಾರರ ಉದ್ದೇಶ ಒಳ್ಳೆಯದೇ ಇದ್ದರೂ ಕಾನೂನಿನ ಮಿತಿ ಒಳಗಡೆ ವ್ಯವಹರಿಸಬೇಕಾಗುತ್ತದೆ. ಸಂತ್ರಸ್ಥ ಕುಟುಂಬಕ್ಕೆ ಮೇಲ್ಮನವಿ ಸಲ್ಲಿಸಲು ಸಹಾಯ ಮಾಡಿ ಎಂದು ಸಲಹೆ ನೀಡಿದ ವಿಭಾಗೀಯ ಪೀಠ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಲೇವಾರಿಗೊಳಿಸಿತ್ತು.
ಕೋರ್ಟ್ ನಿರ್ದೇಶಿಸಿದಂತೆ ಮರು ತನಿಖೆಗೆ ಸೌಜನ್ಯ ಕುಟುಂಬದವರೇ ಅರ್ಜಿ ಸಲ್ಲಿಸಬೇಕಾಗಿದ್ದು, ಈ ವಿಚಾರವನ್ನು ತಿಳಿಸಿ ನ್ಯಾಯಾಂಗ ಹೋರಾಟ ಮತ್ತು ಸೌಜನ್ಯಳಿಗೆ ನ್ಯಾಯಕ್ಕಾಗಿ ತಮ್ಮ ಜೊತೆ ಇದ್ದೇವೆ ಎಂಬ ಭರವಸೆ ನೀಡಲಾಯಿತು ಎಂದು ಪ್ರಮುಖರು ತಿಳಿಸಿದರು.
ಈ ಸಂದರ್ಭ ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್, ಬಜರಂಗದಳ ಪ್ರಾಂತ ಸಹ ಸಂಯೋಜಕ್ ಮುರಳಿಕೃಷ್ಣ ಹಸಂತ್ತಡ್ಕ, ಬಜರಂಗದಳ ವಿಭಾಗ ಸಹ ಸಂಯೋಜಕ್ ಪುನೀತ್ ಅತ್ತಾವರ, ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ, ನ್ಯಾಯವಾದಿ ಅನಿಲ್ ದಡ್ಡು, ವಿಶ್ವ ಹಿಂದೂ ಪರಿಷದ್ ಬೆಳ್ತಂಗಡಿ ಪ್ರಖಂಡ ಅಧ್ಯಕ್ಷ ದಿನೇಶ್ ಚಾರ್ಮಾಡಿ, ರಮೇಶ್, ಮೋಹನ್ ಮೊದಲಾದವರು ಉಪಸ್ಥಿತರಿದ್ದರು.