ಪುತ್ತೂರು: ಸಿಂಗಾಣಿ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಠಮಿ ಹಾಗೂ ಬಪ್ಪಳಿಗೆ ಎಂಸಿಬಿ ಸ್ಪೋರ್ಟ್ಸ್ ಆ್ಯಂಡ್ ಆರ್ಟ್ಸ್ ಕ್ಲಬ್ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆ ಮತ್ತು ಕೃಷ್ಣ ವೇಷಧಾರಿಗಳ ಶೋಭಾಯಾತ್ರೆ ಬಪ್ಪಳಿಗೆ ಸಿಂಗಾಣಿಯಲ್ಲಿ ನಡೆಯಿತು.
ಕೃಷ್ಣ ವೇಷಧಾರಿ ಮಕ್ಕಳ ಭವ್ಯ ಶೋಭಾಯತ್ರೆಗೆ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಪ್ರಧಾನ ಅರ್ಚಕ ರವಿಚಂದ್ರ ನೆಲ್ಲಿತ್ತಾಯ ಚಾಲನೆ ನೀಡಿದರು. ಬಳಿಕ ರಾಗಿಕುಮೇರಿ ಶಾಲಾ ಬಳಿಯಿಂದ ಸಿಂಗಾಣಿವರೆಗೂ ಚೆಂಡೆ, ವಾದ್ಯ, ಬ್ಯಾಂಡ್ ಸೆಟ್ ಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು. ಬಳಿಕ ಸಿಂಗಾಣಿಯ ಹಿಲ್ ಗ್ರೌಂಡ್ ನಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ಜರಗಿತು.
ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿ, ಕೃಷ್ಣನನ್ನು ಪೂಜಿಸುವಂತಹ ಕಾರ್ಯಕ್ರಮ ಎಲ್ಲೆಡೆ ನಡೆಯಬೇಕು. ದೇವರ ಪೂಜಾ ಕೈಂಕರ್ಯಗಳನ್ನು ಹಿಂದೂ ಸಮಾಜ ಒಗ್ಗಟ್ಟಾಗಿ ಮಾಡಬೇಕು. ಹಿಂದೂ ಸಮಾಜ ಒಗ್ಗಟ್ಟಾಗಬೇಕಾದರೆ ಮೊದಲಿಗೆ ನಮ್ಮ ಧರ್ಮ ಉಳಿಸುವಂತ ಕೆಲಸವನ್ನು ಮಾಡಬೇಕಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಧರ್ಮವನ್ನು ದೂಷಿಸುವಂತ ಕೆಲಸ ನಡೆಯುತ್ತಾ ಇದೆ. ಹೀಗಿರುವಾಗ ಅದನ್ನು ಪ್ರಶ್ನಿಸುವಂತ ಜವಾಬ್ದಾರಿ ನಮ್ಮ ಹಿಂದೂ ಸಮಾಜಕ್ಕೆ ಇರಬೇಕು. ಈ ಮೂಲಕ ಹಿಂದೂ ಸಮಾಜ ಒಗ್ಗಟ್ಟಾಗಿ ಧರ್ಮವನ್ನು ಇನ್ನಷ್ಟು ಗಟ್ಟಿಗೊಳಿಸುವ ಕಾರ್ಯ ಆಗಬೇಕು ಎಂದರು.
ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಹಿಂದೂ ಸಮಾಜದ ಏಳಿಗೆಗೆ ನಾನೆಂದೂ ಸಿದ್ಧ. ಹಿಂದೂ ಸಮಾಜವನ್ನು ಭದ್ರವಾಗಿ ಕಾಪಾಡುವುದು ನಮ್ಮೆಲ್ಲರ ಹೊಣೆ. ಹಾಗಾಗಿ ಧರ್ಮವನ್ನು ಉಳಿಸುವ ಜೊತೆಗೆ ಬೆಳೆಸುವ ಕೆಲಸ ಆಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಿತ್ರನಟ, ಹಾಸ್ಯಕಲಾವಿದ ರವಿ ರಾಮಕುಂಜ, ನಿವೃತ್ತ ಶಿಕ್ಷಕಿ ಕಮಲಾಕ್ಷಿ ಟೀಚರ್, ಮೋಕ್ಷಧಾಮ ಮೇಲ್ವಿಚಾರಕ ಸತೀಶ್, ನಿವೃತ್ತ ಪೊಲೀಸ್ ಅಧಿಕಾರಿ ರಾಮ್ ನಾಯ್ಕ ಮತ್ತು ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ್ತಿ ವಿನುಶ್ರೀ ಗೌಡ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿಜೇತರಿಗೆ ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ವೈದ್ಯ ಡಾ. ರವಿ ನಾರಾಯಣ ಭಟ್, ಅಂಗನವಾಡಿ ಕಾರ್ಯಕರ್ತೆ ಸುಮಿತ್ರಾ ಹರೀಶ್ ಮೊದಲಾದವರು ಉಪಸ್ಥಿತರಿದ್ದರು.