ಪುತ್ತೂರು: ಶಾಸಕರ ನೂತನ ಕಚೇರಿ ನವೀಕರಣಕ್ಕೆ ತೆರಿಗೆ ಹಣವನ್ನು ಬಳಸಿಕೊಂಡು, ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಈ ಹಿನ್ನೆಲೆಯಲ್ಲಿ ನಗರ ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನೀವಾಸ್ ರಾವ್ ಅಧ್ಯಕ್ಷತೆಯಲ್ಲಿ ನಗರಸಭೆ ಸದಸ್ಯರ ಸಭೆ ಬಿಜೆಪಿ ಕಚೇರಿಯಲ್ಲಿ ನಡೆಯಿತು.
ನೂತನ ಕಚೇರಿಗಾಗಿ ತೆರಿಗೆ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಶಾಸಕರ ಕ್ರಮ ಸರಿಯಲ್ಲ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಇದರೊಂದಿಗೆ, ಅಮೃತ ನಗರೋತ್ಥಾನ ಯೋಜನೆ ಕಾಮಗಾರಿ ಅನುಷ್ಠಾನ ವಿಳಂಬ, ನಗರಸಭಾ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ವಿಳಂಬ ಮೊದಲಾದ ಕಾಂಗ್ರೆಸ್ ಸರಕಾರದ ವೈಫಲ್ಯಗಳ ಕುರಿತು ಶೀಘ್ರದಲ್ಲೇ ನಗರಸಭಾ ಸದಸ್ಯರು ಪ್ರತಿಭಟನೆ ನಡೆಸುವುದರ ಬಗ್ಗೆ ಚರ್ಚಿಸಲಾಯಿತು.
ನಿಕಟ ಪೂರ್ವ ಶಾಸಕ ಸಂಜೀವ ಮಠಂದೂರು, ನಿಕಟ ಪೂರ್ವ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಬಿಜೆಪಿ ಮಂಗಳೂರು ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಅಪ್ಪಯ್ಯ ಮಣಿಯಾಣಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಯುವರಾಜ್ ಪೆರಿಯತ್ತೋಡಿ, ಜಯಶ್ರೀ ಎಸ್. ಶೆಟ್ಟಿ ಹಾಗೂ ನಗರಸಭಾ ಸದಸ್ಯರು ಉಪಸ್ಥಿತರಿದ್ದರು.