ಮಂಗಳೂರು, ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಹೆಚ್ಚುವರಿ ಬಸ್ | ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕೆ.ಎಸ್.ಆರ್.ಟಿ.ಸಿ. ಕ್ರಮ | 4ಕ್ಕಿಂತ ಹೆಚ್ಚು ಮಂದಿ ಪ್ರಯಾಣಿಸಿದರೆ ರಿಯಾಯಿತಿಯೂ ಇದೆ: ರಿಯಾಯಿತಿ ಎಷ್ಟು ಗೊತ್ತೇ?

ಬೆಂಗಳೂರು: ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸೆ. 15, 16, 17ರಂದು ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಹಾಗೂ ಮಂಗಳೂರು ಭಾಗಗಳಿಗೂ ಹೆಚ್ಚುವರಿ ಬಸ್’ಗಳನ್ನು ಕೆ.ಎಸ್.ಆರ್.ಟಿ.ಸಿ. ನಿಯೋಜಿಸಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನಿಂದ ಸೆ.15, 16 ಹಾಗೂ 17 ಈ ಮೂರು ದಿನಗಳಂದು ಹೆಚ್ಚುವರಿ 1200 ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಿದೆ. ಜತೆಗೆ ರಾಜ್ಯ ಹಾಗೂ ಅಂತರಾಜ್ಯದ ವಿವಿಧ ಕಡೆಗಳಿಂದ ಬೆಂಗಳೂರಿಗೆ ಸೆ. 18ರಂದು ವಿಶೇಷ ವಾಹನಗಳ ಕಾರ್ಯಾಚರಣೆ ಕೈಗೊಂಡಿದೆ.

ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಯಾದಗಿರಿ, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್ ಸೇರಿದಂತೆ ಮುಂತಾದ ಕಡೆಗಳಿಗೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.































 
 

ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗ, ತಮಿಳುನಾಡು ಮತ್ತು ಕೇರಳ ಕಡೆಗೆ ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರ್, ತಿರುಚಿ, ಪಾಲಕ್ಕಾಡ್, ತ್ರಿಶೂರ್, ಎರ್ನಾಕುಲಂ, ಕ್ಯಾಲಿಕಟ್ ಮುಂತಾದ ಸ್ಥಳಗಳಿಗೆ ತೆರಳುವ ಪ್ರತಿಷ್ಠಿತ ಸಾರಿಗೆಗಳನ್ನು ಶಾಂತಿನಗರದಲ್ಲಿನ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಿಂದ ಮಾಡಲಾಗಿದೆ.

ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆಗಳಿಗೆ ಮುಂಗಡ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮೊದಲು ಮುಂಗಡ ಕಾಯ್ದಿರಿಸಲಾಗಿರುವ ಟಕೇಟ್‍ ಗಳ ಮೇಲೆ ನಮೂದಿಸಲಾಗಿರುವ ಬಸ್ ನಿಲ್ದಾಣ, ಪಿಕ್‍ಅಪ್‍ ಪಾಯಿಂಟ್‍ ಗಳನ್ನು ಗಮನಿಸುವಂತೆ ತಿಳಿಸಲಾಗಿದೆ. ಇ ಟಿಕೇಟ್ ಬುಕಿಂಗ್‍ ನ್ನು  www.ksrtc.karnataka.gov.in ವೆಬ್‍ಸೈಟ್ ಮೂಲಕ ಮಾಡಬಹುದು.

ಪ್ರಯಾಣಿಕರು ಕರ್ನಾಟಕ ಹಾಗೂ ಅಂತರಾಜ್ಯದಲ್ಲಿರುವ 691 ಗಣಕೀಕೃತ ಬುಕಿಂಗ್ ಕೌಂಟರ್‍ ಗಳ ಮೂಲಕ ಮುಂಗಡ ಆಸನಗಳನ್ನು ಕಾಯ್ದಿರಿಸಬಹುದು. ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೇಟ್ ಕಾಯ್ದಿರಿಸಿದಲ್ಲಿ ಶೇ. 5 ರಿಯಾಯಿತಿ ನೀಡಲಾಗುವುದು. ಅಲ್ಲದೆ ಹೋಗುವ ಮತ್ತು ಬರುವ ಪ್ರಯಾಣದ ಟಿಕೇಟನ್ನು ಒಟ್ಟಿಗೆ ಕಾಯ್ದಿರಿಸಿದರೆ ವಾಪಾಸಾಗುವ ಪ್ರಯಾಣ ದರದಲ್ಲಿ ಶೇ. 10ರಷ್ಟು ರಿಯಾಯಿತಿ ನೀಡಲಾಗುವುದು. ಹೆಚ್ಚುವರಿ ಸಾರಿಗೆಗಳಲ್ಲಿ ಸಂಚರಿಸುವ ಪ್ರಯಾಣಿಕರು ಕಾಯ್ದಿರಿಸುವ ಮುಂಗಡ ಟಿಕೇಟ್‍ಗಳಲ್ಲಿ ವಾಹನ ಹೊರಡುವ ಸ್ಥಳದ ವಿವರ ನಮೂದಿಸಲಾಗಿದೆ. ಎಂದು ಕೆಎಸ್‍ಆರ್ ಟಿಸಿ ಬೆಂಗಳೂರು ಕೇಂದ್ರ ಕಚೇರಿ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top