ವಿಟ್ಲ: ಇಲ್ಲಿನ ಎಂಡೋ ಪೀಡಿತೆ ಸಂತ್ರೆಸ್ತೆಯೋರ್ವರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಾಲಯ, ಅಪರಾಧ ಸಾಬೀತು ಪಡಿಸಿ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಪ್ರೀತಿ ಕೆ.ಪಿ. ತೀರ್ಪು ಪ್ರಕಟಿಸಿದ್ದಾರೆ. ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ರಾಜೇಶ್ ರೈ (33 ವ.)ನನ್ನು ನ್ಯಾಯಾಲಯ ಅಪರಾಧಿ ಎಂದು ಘೋಷಿಸಿದೆ.
2015ರ ಅ. 1ರಂದು ಘಟನೆ ನಡೆದಿದ್ದು, ಎಂಡೋ ಸಲ್ಫಾನ್ ಸಂತ್ರಸ್ತೆ ಯುವತಿ ಮನೆಯಲ್ಲಿ ಒಬ್ಬಳೇ ಇದ್ದಾಗ, ಆಗಮಿಸಿದ ರಾಜೇಶ್ ರೈ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದ.
ಅಂದಿನ ಎಎಸ್ಪಿ ರಾಹುಲ್ ಕುಮಾರ್ ತನಿಖೆ ನಡೆಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಯ್ದೆಯಡಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದು, ಅದರಲ್ಲಿ ಆರೋಪಿಯ ವಿರುದ್ಧ 27 ಸಾಕ್ಷಿದಾರರನ್ನು ಉಲ್ಲೇಖಿಸಿದ್ದು, ಅದರಲ್ಲಿ 14 ಸಾಕ್ಷಿದಾರದ ವಿಚಾರಣೆ ನಡೆದಿತ್ತು. 19 ವರ್ಷ ಪ್ರಾಯದ ಎಂಡೋ ಸಂತ್ರಸ್ತೆಯನ್ನು ಅತ್ಯಾಚಾರ ಎಸಗಿರುವ ರಾಜೇಶ್ ರೈ ಕೃತ್ಯವನ್ನು ಸಾಬೀತು ಪಡಿಸಿರುವ ನ್ಯಾಯಾಲಯ, 10 ವರ್ಷದ ಕಠಿಣ ಶಿಕ್ಷೆ ಹಾಗೂ 3 ತಿಂಗಳ ಕಠಿಣ ಶಿಕ್ಷೆ, 10,000 ರೂ., ದಂಡ ವಿಧಿಸಿ ತೀರ್ಪು ನೀಡಿದೆ. ಅಲ್ಲದೆ ಸಂತ್ರಸ್ತೆಗೆ ಪರಿಹಾರ ನೀಡುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ಅದೇಶ ನೀಡಿದೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ ವಾದಿಸಿದ್ದರು.