ಪುತ್ತೂರು: ಶ್ರೀ ಮೇಘವರ್ಣ ಮೂವೀಸ್ ಫ್ರೆಂಡ್ಸ್ ಅರ್ಪಿಸುವ ಚಲನಚಿತ್ರ “ನಂಬರ್ ಪ್ಲೇಟ್”ಗೆ ಇಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಚಾಲನೆ ನೀಡಲಾಗಿದ್ದು, ಸುಮಾರು ಒಂದು ತಿಂಗಳ ಕಾಲ ಪುತ್ತೂರಿನ ಆಸುಪಾಸಿನಲ್ಲಿ ಚಿತ್ರೀಕರಣ ನಡೆಯಲಿದ್ದು, ಬಳಿಕ ಬೆಂಗಳೂರು, ತುಮಕೂರುಗಳಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರಕತೆ ಸಂಭಾಷಣೆ ನಿರ್ದೇಶನ ಗಂಗರಾಜ್ ಪಿ.ಆರ್. ತಿಳಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರ ಒಂದು ಕಾಲ್ಪನಿಕ ಕಥೆಯ ಈ ಚಲನಚಿತ್ರದಲ್ಲಿ ಹಾರರ್, ಕಾಮಿಡಿ ಎಲ್ಲವೂ ಇದೆ. ಕುಟುಂಬ ಸಮೇತ ವೀಕ್ಷಿಸುವ ಚಿತ್ರ ಇದಾಗಿದೆ ಎಂದು ತಿಳಿಸಿದರು.
ಸ್ನೇಹಿತನಿಗೆ ಮದುವೆ ಮಾಡಲು ಹೊರಟ ತಂಡ, ದಟ್ಟ ಕಾಡಿನ ಮಧ್ಯೆ ಸಿಲುಕಿ ಅವರು ಅನುಭವಿಸುವ ಕಷ್ಟ ಮೊದಲಾದ ಅದ್ಭುತ ಸಂಗತಿಗಳನ್ನು ಚಿತ್ರ ಹೊಂದಿದೆ. ಮುಂದಿನ ಜನವರಿ – ಮಾರ್ಚ್ ವೇಳೆಗೆ ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ತಿಳಿಸಿದರು.
ಚಿತ್ರದ ನಾಯಕ ನಟನಾಗಿ ಪುತ್ತೂರಿನವರೇ ಆದ ಆರ್ಯನ್, ನಾಯಕಿ ನಟಿಯಾಗಿ ಕೀರ್ತಿ ಗೌಡ, ಖಳನಾಯಕನಾಗಿ ವಿಜಯ ಸೂರ್ಯ ನಟಿಸಲಿದ್ದಾರೆ ಎಂದು ತಿಳಿಸಿದರು.
ತುಳು ಚಿತ್ರಕ್ಕಾಗಿ ಸ್ಟೋರಿ ರೆಡಿ: ನಾಯಕ ಆರ್ಯನ್
ನಾಯಕನಟ ಆರ್ಯನ್ ಮಾತನಾಡಿ, ನಾನು ನಟಿಸಿರುವ ನಾಲ್ಕನೇ ಚಿತ್ರ ಇದಾಗಿದ್ದು, ಈ ಹಿಂದೆ ವೇಷಧಾರಿ, ಗ್ರೂಫಿ ಚಿತ್ರ ತೆರೆ ಕಂಡಿದೆ. ಶತ್ರುಘ್ನ ಚಿತ್ರೀಕರಣ ಹಂತದಲ್ಲಿದೆ. ಇದೀಗ ನಾಲ್ಕನೇ ಚಿತ್ರದ ಚಿತ್ರೀಕರಣಕ್ಕೆ ಮುಹೂರ್ತ ಫಿಕ್ಸ್ ಆಗಿದೆ ಎಂದ ಅವರು, ಮುಂದಿನ ದಿನಗಳಲ್ಲಿ ತುಳು ಚಿತ್ರದಲ್ಲಿ ನಟಿಸುವ ಇರಾದೆಯಿದ್ದು, ಅದಕ್ಕಾಗಿ ಈಗಾಗಲೇ ನಾನೇ ಸ್ವತಃ ಸ್ಟೋರಿ ರೆಡಿ ಮಾಡಿದ್ದೇನೆ ಎಂದರು.
ಖಳನಟ ವಿಜಯ ಸೂರ್ಯ ಮಾತನಾಡಿ, ನಂಬರ್ ಪ್ಲೇಟ್ ನನ್ನ 11ನೇ ಚಿತ್ರ. ಹೊಸ ಪ್ರಯತ್ನದಲ್ಲಿ ಚಿತ್ರೀಕರಣ ಸಾಗುತ್ತಿದೆ. ಎಲ್ಲರ ಸಹಕಾರ ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ನಾಯಕ ನಟಿ ಕೀರ್ತಿ ಗೌಡ, ಕೆಮರಾಮ್ಯಾನ್ ರವಿರಾಮ ದುರ್ಗಾ ಉಪಸ್ಥಿತರಿದ್ದರು.