ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದಿದ್ದ ಖಾಸಗಿ ಸಾರಿಗೆ ಒಕ್ಕೂಟದವರು ಕರೆ ನೀಡಿರುವ ‘ಬೆಂಗಳೂರು ಬಂದ್’ ವಾಪಸ್ ಪಡೆಯಲಾಗಿದೆ.
ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, 32 ಬೇಡಿಕೆಗಳ ಪೈಕಿ 27 ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ‘ಬೆಂಗಳೂರು ಬಂದ್’ ವಾಪಸ್ ಪಡೆದಿರುವುದಾಗಿ ಖಾಸಗಿ ಸಾರಿಗೆ ಒಕ್ಕೂಟದ ಪದಾಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಖಾಸಗಿ ಸಾರಿಗೆ ಒಕ್ಕೂಟದ ಅಧ್ಯಕ್ಷ, ವಕೀಲ ನಟರಾಜ್ ಶರ್ಮಾ, ‘ನಮ್ಮ ಮುಖ್ಯ ಬೇಡಿಕೆಗಳ ಪೈಕಿ ಕೆಲವನ್ನು ಕೂಡಲೇ ಈಡೇರಿಸುವ ಭರವಸೆ ನೀಡಿದ್ದಾರೆ. ನಮ್ಮ ಬಂದ್ನಿಂದ ಇಡೀ ಬೆಂಗಳೂರು ಸ್ತಬ್ದವಾಗಿತ್ತು. ಇದು ನಮ್ಮ ಸಾರಿಗೆ ಒಕ್ಕೂಟ ಶಕ್ತಿ’ ಎಂದು ತಿಳಿಸಿದ್ದಾರೆ.
ಇದರ ನಡುವೆ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರು ಬಿಎಂಟಿಸಿ ಬಸ್’ನಲ್ಲಿ ಪ್ರಯಾಣಿಸಿದ್ದು, ಅದರ ಫೊಟೋವನ್ನು ಹಂಚಿಕೊಂಡಿದ್ದಾರೆ.
ಖಾಸಗಿ ಸಾರಿಗೆ ಒಕ್ಕೂಟಗಳು ನೀಡಿದ್ದ ಬೆಂಗಳೂರು ಬಂದ್ಗೆ ವಿಮಾನ ನಿಲ್ದಾಣದ ಟ್ಯಾಕ್ಸಿ ಚಾಲಕರು ಸಹ ಬಂದ್ ಬೆಂಬಲಿಸಿದ್ದರು. ಆದ್ದರಿಂದ ಅನಿಲ್ ಕುಂಬ್ಳೆ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಿಎಂಟಿಸಿ ಬಸ್ನಲ್ಲಿ ಮನೆ ಕಡೆ ಪ್ರಯಾಣ ಬೆಳೆಸಿರುವ ಫೋಟೊ ವೈರಲ್ ಆಗುತ್ತಿದೆ.
ಬಂದ್ನಿಂದ ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಬಿಎಂಟಿಸಿ ಮುನ್ನೆಚರಿಕೆ ಕ್ರಮ ಕೈಕೊಂಡಿತ್ತು. ಕೆಂಪೇಗೌಡ ಏರ್ಪೋರ್ಟ್ ನಿಂದ ವಿವಿಧ ಸ್ಥಳಗಳಿಗೆ ಹೆಚ್ಚುವರಿ ಟ್ರಿಪ್ ಮಾಡಲು ಚಾಲಕರಿಗೆ ಸೂಚಿಸಲಾಗಿತ್ತು.