ಪುತ್ತೂರು: ಅನಾದಿ ಕಾಲದ ಜನರ ಸಂವಹನವೇ ಕಾವ್ಯ. ಇಂತಹ ಕಾವ್ಯ ಪರಂಪರೆ ಓದುಗರಿಗೆ ಹೊಸತನವನ್ನು ನೀಡುತ್ತದೆ ಎಂದು ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಮನೋಹರ ಪ್ರಸಾದ್ ಹೇಳಿದರು.

ಅವರು ಭಾನುವಾರ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪುತ್ತೂರು ಘಟಕ, ಪುತ್ತೂರು ಚಿಗುರೆಲೆ ಸಾಹಿತ್ಯ ಬಳಗ ಹಾಗೂ ಸುದಾನ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಸುದಾನ ವಿದ್ಯಾಸಂಸ್ಥೆಗಳ ಎಡ್ವರ್ಡ್ ಸಭಾಂಗಣದಲ್ಲಿ ಶಶಿಕಲಾ ವರ್ಕಾಡಿಯವರ ನೀನೊಂದು ಮುಗಿಯದ ಕವಿತೆ ಕವನ ಸಂಕಲನ ಬಿಡುಗಡೆಗೊಳಿಸಿ ಕೃತಿ ಪರಿಚಯ ಮಾಡಿ ಮಾತನಾಡಿದರು.

ಕಾವ್ಯದ ಭಾಷೆ ಓದುಗರನ್ನು ಮುಟ್ಟುವಂತಿರಬೇಕು. ಯಾವತ್ತೂ ನಡೆಯುವವನೇ ಎಡವುದಲ್ಲದೇ ಮಲಗಿದವನು ಎಡವುದಿಲ್ಲ ಎಂದ ಅವರು, ಕೊನೆ ಎಂಬುದು ಆರಂಭದ ಹೆಜ್ಜೆಯಾಗಲಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿವೇಕಾನಂದ ಮಹಾ ವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ. ಹೆಚ್.ಜಿ. ಶ್ರೀಧರ್, ಕಾವ್ಯದ ಶೈಲಿ ಬಗೆದಷ್ಟೂ ಆಳ. ಅದು ಎಂದಿಗೂ ಮುಗಿಯದ ಹರಿವು. ಜಗತ್ತಿಗೆ ಎಲ್ಲಾ ವಿಚಾರಗಳನ್ನು ಹೊಸತಾಗಿ ಕೊಡುವವನೇ ಕವಿ ಎಂದು ಹೇಳಿದರು.
ನ್ಯಾಯವಾದಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಕುಂಬ್ರ ದುರ್ಗಾ ಪ್ರಸಾದ್ ರೈ ಅವರು ಕೃತಿಕಾರರ ಪರಿಚಯ ಮಾಡಿದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಸುದಾನ ಶಾಲಾ ಸಂಚಾಲಕ ವಿಜಯ ಹಾರ್ವಿನ್, ದ.ಕ. ಜಿಲ್ಲಾ ಕ.ಸಾ.ಪ. ಗೌರವ ಕೋಶಾಧ್ಯಕ್ಷ ಐತ್ತಪ್ಪ ನಾಯ್ಕ್ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಹಿರಿಯರಾದ ಮನೋಹರ ಪ್ರಸಾದ್ ಹಾಗೂ ಕವನ ಸಂಕಲನದ ಮುಖಪುಟ ವಿನ್ಯಾಸಕಾರ ಜಾನ್ ಚಂದ್ರನ್ ಅವರನ್ನು ಗೌರವಿಸಲಾಯಿತು.
ಚಿಗುರೆಲೆ ಸಾಹಿತ್ಯ ಬಳಗದ ಅಪೂರ್ವ ಕಾರಂತ್ ಪ್ರಾರ್ಥಿಸಿದರು. ನೀನೊಂದು ಮುಗಿಯದ ಕವಿತೆಯ ಕೃತಿಕಾರರಾದ ಶಶಿಕಲಾ ವರ್ಕಾಡಿ ಸ್ವಾಗತಿಸಿ, ಚಿಗುರೆಲೆ ಸಾಹಿತ್ಯ ಬಳಗದ ಸೌಮ್ಯ ರಾವ್ ಕಲ್ಲಡ್ಕ ವಂದಿಸಿದರು. ಯುವಸಾಹಿತಿ, ಕುಂಡಡ್ಕ ಗುಣಶ್ರೀ ವಿದ್ಯಾಲಯದ ಮುಖ್ಯ ಶಿಕ್ಷಕ ರಾಜಾರಾಮ ವರ್ಮ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
ಮುಗಿಯದ ಕವಿತೆಗೆ ಮನದ ಕವಿತೆ:
ಕವನ ಸಂಕಲನ ಬಿಡುಗಡೆ ಬಳಿಕ ಪುತ್ತೂರು ಚಿಗುರೆಲೆ ಸಾಹಿತ್ಯ ಬಳಗದ ನಾರಾಯಣ ಕುಂಬ್ರ ಅವರ ಸಂಯೋಜನೆಯಲ್ಲಿ ದಕ್ಷಿಣ ಕನ್ನಡ, ಬೆಂಗಳೂರು, ಕಾಸರಗೋಡು ಪರಿಸರದ ಯುವಕವಿಗಳಿಂದ “ಮುಗಿಯದ ಕವಿತೆಗೆ ಮನದ ಕವಿತೆ” ಎಂಬ ಕವಿಗೋಷ್ಠಿ ನಡೆಯಿತು. ಶಿಕ್ಷಕಿ ಹಾಗೂ ಸಾಹಿತಿ ವಿಜಯಲಕ್ಷ್ಮಿ ಕಟೀಲು ಅವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿಗಳಾದ ಜೆಸ್ಸಿ ಪಿ.ವಿ. ಮತ್ತು ಸುಪ್ರೀತಾ ಚರಣ್ ಪಾಲಪ್ಪೆ ಕವಿಗೋಷ್ಠಿಯನ್ನು ನಿರೂಪಿಸಿದರು.