ಪುತ್ತೂರು: ಧರ್ಮಸ್ಥಳ ಗ್ರಾಮದ ಮಣ್ಣಸಂಕದಲ್ಲಿ ಅತ್ಯಾಚಾರಕ್ಕೀಡಾಗಿ ಹತ್ಯೆಗೀಡಾದ ವಿದ್ಯಾರ್ಥಿನಿ ಸೌಜನ್ಯ ಪ್ರಕರಣ ಮರು ತನಿಖೆ ನಡೆಸಲು ಸರಕಾರಕ್ಕೆ ನಿರ್ದೇಶನ ನೀಡುವಂತೆ ಆಗ್ರಹಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆಯಲಿದೆ.
ಧರ್ಮಸ್ಥಳದ ಪಾಂಗಳ ನಿವಾಸಿಗಳಾದ ಚಂದಪ್ಪ ಗೌಡ ಹಾಗೂ ಕುಸುಮಾವತಿ ದಂಪತಿ ಪುತ್ರಿ ಸೌಜನ್ಯರನ್ನು ಅಪಹರಿಸಿ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿತ್ತು. ಈ ಕುರಿತು ಪೊಲೀಸ್ ಇಲಾಖೆ, ಸಿಐಡಿ, ಸಿಬಿಐ ತನಿಖೆ ನಡೆದಿತ್ತು. ಪ್ರಕರಣ ಸಂಬಂಧಿಸಿ ಬಂಧಿತನಾಗಿದ್ದ ಕಾರ್ಕಳದ ಸಂತೋಷ್ ರಾವ್ ನಿರಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿತ್ತು.
ಬಳಿಕ ದಿನಗಳಲ್ಲಿ ಸೌಜನ್ಯ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಗಳು ಕೇಳಿ ಬಂದಿತ್ತು. ಈ ಮಧ್ಯೆ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಗಿರೀಶ್ ಭಾರದ್ವಾಜ್, ನವೀನ್ ಕುಮಾರ್ ನೆರಿಯ ಮತ್ತು ಬಲ್ಯಾಡು ವಿನಾಯಕ ಫ್ರೆಂಡ್ಸ್ ಟ್ರಸ್ಟ್ ಸಲ್ಲಿಸಿದ ಹಿತಾಸಕ್ತಿ ಅರ್ಜಿ ಸೆ.8 ಇಂದು ಉಚ್ಛ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ. ಅರ್ಜಿದಾರರ ಪರ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ವಾದಿಸಲಿದ್ದಾರೆ.