ನರಿಮೊಗರು : ಜಗತ್ತು ತಾನು, ತನ್ನದು ಎಂಬ ಸ್ವಾರ್ಥದಲ್ಲಿ ಮುಳುಗಿರುವಾಗ ಪರಾರ್ಥಕ್ಕೋಸ್ಕರ ಬದುಕಿದ ಪುರುಷೋತ್ತಮ ಶ್ರೀ ಕೃಷ್ಣ ಭಗವಂತ,ಸೇವೆ ಎಂಬ ಮೌಲ್ಯವನ್ನು ಭಾರತೀಯರಲ್ಲಿ ತುಂಬಿದ. ಬೌದ್ಧಿಕ ಹಾಗೂ ಆಧ್ಯಾತ್ಮಿಕ ನಡೆಯನ್ನು ತನ್ನ ಬದುಕಿನಲ್ಲಿ ಬಾಳಿ ತೋರಿಸಿ ಆದರ್ಶವನ್ನು ತುಂಬಿದ ಎಂದು ಸರಸ್ವತಿ ವಿದ್ಯಾ ಮಂದಿರದ ಸಂಚಾಲಕ ಅವಿನಾಶ್ ಕೊಡಂಕಿರಿ ಹೇಳಿದರು.
ಶಾಲೆಯಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಭಾರತದಲ್ಲಿ ಇಂದಿಗೂ ಇತರರಿಗಾಗಿ ಮಿಡಿಯುವ ಹೃದಯಗಳಿದ್ದರೆ ಅದಕ್ಕೆ ಶ್ರೀ ಕೃಷ್ಣನ ಜೀವನಾದರ್ಶ ನಮ್ಮೊಳಗೇ ಗುಪ್ತ ಗಾಮಿನಿಯಾಗಿ ಇರುವುದೇ ಕಾರಣ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ 70 ಕ್ಕೂ ಅಧಿಕ ಕೃಷ್ಣ, ರಾಧಾ ವೇಷಧಾರಿ ಪುಟಾಣಿಗಳು ಭಾಗವಹಿಸಿ ಪ್ರದರ್ಶನ ನೀಡಿದರು. ಬಳಿಕ ಶ್ರೀಕೃಷ್ಣ ನಿಗೆ ಪುಷ್ಪಾರ್ಚನೆ ನಡೆಯಿತು. ವಿದ್ಯಾರ್ಥಿಗಳಿಂದ ಭಜನೆ ನಡೆಯಿತು. ಚಿತ್ರ ಕಲಾ ಸ್ಪರ್ಧೆ, ಹಗ್ಗ ಜಗ್ಗಾಟ ಸ್ಪರ್ಧೆಗಳು ನಡೆದವು. ಪ್ರೌಢಶಾಲಾ ಶಿಕ್ಷಣ ಸಂಯೋಜಕ ರಾಜಾರಾಮ ನೆಲ್ಲಿತ್ತಾಯ ಸ್ವಾಗತಿಸಿದರು. ಸಂಸ್ಕೃತ ಶಿಕ್ಷಕ ಪರೀಕ್ಷಿತ್ ತೋಳ್ಪಾಡಿ ವಂದಿಸಿದರು. ಶಿಕ್ಷಕಿ ಪವಿತ್ರ ನಿರೂಪಿಸಿದರು. ವೇದಿಕೆಯಲ್ಲಿ ಆಡಳಿತಾಧಿಕಾರಿ ಶುಭಾ, ಮುಖ್ಯ ಶಿಕ್ಷಕಿ ದಿವ್ಯಾ ಉಪಸ್ಥಿತರಿದ್ದರು. ಭಾಗವಹಿಸಿದ ಪುಟಾಣಿಗಳಿಗೆ ಬಹುಮಾನ ನೀಡಲಾಯಿತು.