ಮೈಸೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ನೂತನ ವೆಬ್ಸೈಟ್ www.kasapaputturu.in ಇದರ ಲೋಕಾರ್ಪಣೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶ್ರೀ ಶಿವರಾಜ ಎಸ್ ತಂಗಡಗಿ ಮೈಸೂರಿನ ಜಲದರ್ಶಿನಿ ಅತಿಥಿಗೃಹ ದಲ್ಲಿ ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಸಾಹಿತ್ಯಕ್ಕೆ ಪುತ್ತೂರಿನ ಸಾಹಿತಿಗಳ ಕೊಡುಗೆಗಳ ವಿವರವನ್ನು ಪುತ್ತೂರು ಉಮೇಶ್ ನಾಯಕ್ ಅವರು ಮಾನ್ಯ ಸಚಿವರಿಗೆ ತಿಳಿಸಿದರು. ಸಾಹಿತ್ಯ ಪರಿಷತ್ತಿನ ವೆಬ್ಸೈಟಿನ ವಿವರವನ್ನು ಡಾ. ಹರ್ಷ ಕುಮಾರ್ ರೈ ಸಚಿವರಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ಸಚಿವರು ಪುತ್ತೂರು ತಾಲೂಕು ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಮಾತ್ರವಲ್ಲದೆ ಸಾಧ್ಯವಾದಲ್ಲಿ ಮುಂದಿನ ಯಾವುದಾದರೂ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ತಿಳಿಸಿದರು.
ಬಹುಶಃ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಇದರ ವೆಬ್ಸೈಟು ಹೊರತುಪಡಿಸಿ ಇಡೀ ಕರ್ನಾಟಕ ರಾಜ್ಯದಲ್ಲೇ ಒಂದು ತಾಲೂಕು ಘಟಕದ ವೆಬ್ಸೈಟ್ ನಿರ್ಮಾಣವಾಗಿದ್ದರೆ ಅದರ ಗೌರವವು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿಗೆ ಸಲ್ಲುತ್ತದೆ. ಈ ವೆಬ್ ಸೈಟಿನಲ್ಲಿ , ಪುತ್ತೂರು ತಾಲೂಕಿನ ಸಾಹಿತ್ಯ ಪರಿಷತ್ತಿನ ಸರ್ವ ಪದಾಧಿಕಾರಿಗಳ ವಿವರ ಮಾತ್ರವಲ್ಲದೆ ಜಿಲ್ಲಾ ಪದಾಧಿಕಾರಿಗಳು ಹಾಗೂ ಕೇಂದ್ರ ಸಾಹಿತ್ಯ ಪರಿಷತ್ತಿನಲ್ಲಿ ಈವರೆಗೆ ಸೇವೆ ಸಲ್ಲಿಸಿದ ಅಧ್ಯಕ್ಷರ ವಿವರಗಳು ಲಭ್ಯವಿದೆ. ಮುಖ್ಯವಾಗಿ ಪುತ್ತೂರು ತಾಲೂಕಿನಲ್ಲಿ ನಡೆಯುವ ಸಾಹಿತ್ಯ ಚಟುವಟಿಕೆಗಳ ವಿವರ, ಸಮ್ಮೇಳನಗಳ ವಿವರ, ಮಾತ್ರವಲ್ಲದೆ ಪುತ್ತೂರು ತಾಲೂಕಿನಲ್ಲಿ ಸೇವೆ ಸಲ್ಲಿಸಿದ ಹಿರಿಯ- ಕಿರಿಯ ಸಾಹಿತಿಗಳ ವಿವರಗಳು ಲಭ್ಯವಿದೆ.
ಕೆಯ್ಯೂರಿನ ಶ್ರೀ ಹೊನ್ನಪ್ಪ ಕುಲಾಲ್, ಸರೋಜಿನಿ ದಂಪತಿಗಳ ಪುತ್ರನಾದ ಯುವ ಸಾಫ್ಟ್ವೇರ್ ಇಂಜಿನಿಯರ್ ಯುವ ಸಾಹಿತಿ ಪ್ರಮೀತ್ ರಾಜ್ ಕಟ್ಟತ್ತಾರು ಈ ನೂತನ ವೆಬ್ಸೈಟ್ ಅನ್ನು ಸಂಪೂರ್ಣವಾಗಿ ಉಚಿತ ವಾಗಿ ನಿರ್ಮಾಣ ಮಾಡಿ ಸಾಹಿತ್ಯ ಪರಿಷತ್ತಿಗೆ ಕೊಡುಗೆಯಾಗಿ ನೀಡಿರುತ್ತಾರೆ.
ಪುತ್ತೂರು ಉಮೇಶ್ ನಾಯಕ್ ಅವರ ಸಾರಥ್ಯದಲ್ಲಿ ಕ. ಸಾ. ಪ -ಪುತ್ತೂರು ಬಹಳ ಉತ್ತಮ ಕಾರ್ಯಮಾಡುತ್ತಿದೆ. ಸಾಹಿತ್ಯ ಪರಿಷತ್ತು ಗ್ರಾಮ ಗ್ರಾಮಕ್ಕೂ ತಲುಪುತ್ತಿದೆ. ಕನ್ನಡದಲ್ಲೂ ಐಎಎಸ್- ಐಪಿಎಸ್ ಪರೀಕ್ಷೆ ಬರೆಯಬಹುದೆಂಬ ಅರಿವನ್ನ ಮೂಡಿಸಿ ಇದನ್ನು ಪರಿಷತ್ ವ್ಯಾಪ್ತಿಯ ಒಳಗೆ ತಂದಿರುವುದು ಸಂತೋಷದ ವಿಚಾರ. ಯುವಜನತೆಯಲ್ಲಿ ಸಾಹಿತ್ಯಾಸಕ್ತಿ ಇನ್ನಷ್ಟು ಬೆಳೆಯಬೇಕು ಮತ್ತು ಹಳ್ಳಿಯ ಮೂಲೆ ಮೂಲೆಯಿಂದಲೂ ಸಾಹಿತಿಗಳ ಸಾಹಿತ್ಯ ಜಗದಗಲ ಪಸರಿಸಬೇಕು. ಇದ್ದಕ್ಕೆ ಇರುವಂತಹ ಒಂದೇ ಒಂದು ಮಾಧ್ಯಮ ಡಿಜಿಟಲ್ ಟೆಕ್ನಾಲಜಿ. ಅದಕ್ಕೆ ಜಾಲತಾಣವು ಪೂರಕ ಎನ್ನಬಹುದು. ಈ ಮುಖಾಂತರ ನನ್ನಿಂದಲೂ ಏನಾದರೂ ಸಾಹಿತ್ಯ ಸೇವೆ ಮಾಡಬೇಕೆಂಬ ನಿಟ್ಟಿನಲ್ಲಿ ಕ ಸಾ ಪ ಪುತ್ತೂರು ಮಾಡುವ ಸೇವೆಯನ್ನು ಹಾಗೂ ಇಲ್ಲಿನ ಸಾಹಿತಿಗಳ ಸೇವೆಯನ್ನು ರಾಜ್ಯ ಮಾತ್ರವಲ್ಲದೆ ರಾಷ್ಟ್ರ- ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪಿಸುವ ನಿಟ್ಟಿನಲ್ಲಿ ಈ ವೆಬ್ಸೈಟ್ ನಿರ್ಮಾಣ ಮಾಡುವ ಮೂಲಕ ಒಂದು ಅಳಿಲ ಸೇವೆಯನ್ನು ನೀಡಿದ್ದೇನೆ ಎಂದು ಹೇಳುತ್ತಾರೆ ಕಸಾಪ ವೆಬ್ ಸೈಟ್ ನಿರ್ಮಾತೃ ಪ್ರಮೀತ್ ರಾಜ್ ಕಟ್ಟತ್ತಾರು