ಶ್ರೀಕೃಷ್ಣನ ಪ್ರತಿಯೊಂದು ನಡೆಗಳಲ್ಲೂ ಸಂದೇಶಗಳಿವೆ : ತೇಜಶಂಕರ ಸೋಮಯಾಜಿ | ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಪುತ್ತೂರು : ಭಗವಾನ್ ಶ್ರೀಕೃಷ್ಣನನ್ನು ನಾನಾ ನೆಲೆಯಿಂದ ಗುರುತಿಸುತ್ತಾ ಸಾಗುವುದಕ್ಕೆ ಸಾಧ್ಯವಿದೆ. ದುಷ್ಟ ಶಿಕ್ಷಣ, ಶಿಷ್ಟ ರಕ್ಷಣದಿಂದ ತೊಡಗಿ ರಾಜತಾಂತ್ರಿಕ ವಿಚಾರಗಳವರೆಗೆ ಅಷ್ಟೂ ವಿಷಯಗಳಲ್ಲಿ ಶ್ರೀಕೃಷ್ಣ ನಮಗೆ ಮಾದರಿಯಾಗಿ ಕಾಣಿಸುತ್ತಾನೆ. ಆತನ ಒಂದೊಂದು ನಡೆಯ ಹಿಂದೆಯೂ ಒಂದೊಂದು ಸಂದೇಶಗಳನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ಆತ ಕೃತಿಯ ಮೂಲಕ ತೋರಿಸಿದ್ದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಅಸಾಧ್ಯರಾದವರು ಆತನನ್ನು ಹೀಗಳೆಯುವ ಮೂಲಕ ತಮ್ಮ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತಿರುವುದನ್ನು ಕಾಣಬಹುದು ಎಂದು ಅಂಬಿಕಾ ಮಹಾವಿದ್ಯಾಲಯದ ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ತತ್ತ್ವಶಾಸ್ತ್ರ ವಿಭಾಗದ ವತಿಯಿಂದ ಬುಧವಾರ ಆಯೋಜಿಸಲಾದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜತಾಂತ್ರಿಕ ನೆಲೆಯಲ್ಲಿ ಶ್ರೀಕೃಷ್ಣನ ಬದುಕು ಸದಾ ವಿಸ್ಮಯಕಾರಿ. ಅರಗಿನ ಅರಮನೆಯಲ್ಲಿ ಪಾಂಡವರು ಸತ್ತರೆಂಬುದನ್ನು ಕೌರವನ ಆಸ್ಥಾನದಲ್ಲಿ ಹೇಳುತ್ತಾ ಬಿಕ್ಕಿ ಬಿಕ್ಕಿ ಅಳುವ ಶ್ರೀಕೃಷ್ಣ ತಾನೂ ಅದನ್ನು ನಂಬಿದವನಂತೆ ವ್ಯವಹರಿಸುತ್ತಾನೆ. ಆದರೆ ದ್ರೌಪದೀ ಸ್ವಯಂವರದ ಕಾಲದಲ್ಲಿ ಅರ್ಜುನ ಮಾತ್ರ ಬೇಧಿಸಬಹುದಾಗಿದ್ದ ಮತ್ಸ್ಯಯಂತ್ರವನ್ನು ಪಣವಾಗಿಡುವುದಕ್ಕೆ ಕಾರಣನಾಗುತ್ತಾನೆ. ಹಾಗಾದರೆ ಅರ್ಜುನ ಸಹಿತವಾಗಿ ಪಾಂಡವರು ಬದುಕಿದ್ದಾರೆಂಬುದನ್ನು ಆತ ಅರಿತಿದ್ದ ಹಾಗೂ ಉದ್ದೇಶಪೂರ್ವಕವಾಗಿಯೇ ಕೌರವನ ಆಸ್ಥಾನದಲ್ಲಿ ಅರಿಯದವರಂತೆ ವ್ಯವಹರಿದ್ದ ಎಂಬುದು ತಿಳಿಯುತ್ತದೆ. ಇದು ಆತನ ರಾಜನೀತಿಯ ನಡೆಯಾಗಿತ್ತೆಂಬುದನ್ನು ಗುರುತಿಸಬೇಕು. ಇಂತಹ ಹಲವು ಘಟನಾವಳಿಗಳು ಅಧ್ಯಯನಾಸಕ್ತರಿಗೆ ಲಭ್ಯವಾಗುತ್ತಾ ಸಾಗುತ್ತದೆ ಎಂದರು.































 
 

ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಹಿಂದೂ ಧರ್ಮದ ಬಗೆಗೆ ಹಲವಾರು ಆಕ್ಷೇಪ ಎತ್ತುವ ಅನ್ಯಧರ್ಮಿಯರು ತಮ್ಮ ಧರ್ಮದಲ್ಲಿನ ಹುಳುಕುಗಳನ್ನು ಮರೆಮಾಚುತ್ತಾರೆ. ಆದರೆ ಹಿಂದೂ ಧರ್ಮದ ಪ್ರತಿಯೊಂದು ಆಚರಣೆಗಳಲ್ಲೂ ಸ್ಪಷ್ಟವಾದ ವೈಜ್ಞಾನಿಕ ತಳಹದಿ ಇರುವುದನ್ನು ಗುರುತಿಸಲು ಅಶಕ್ತರಾಗುತ್ತಾರೆ. ಈ ನಡುವೆ ಹಿಂದೂಧರ್ಮದ ಬಗೆಗೆ ಸ್ವತಃ ಹಿಂದೂಗಳೂ ಅಧ್ಯಯನ ನಡೆಸದೆ ಅನ್ಯಧರ್ಮೀಯನೊಬ್ಬ ವ್ಯಂಗ್ಯವಾಡುವಾಗ ಉತ್ತರ ಕೊಡಲಾಗದೆ ನಿಲ್ಲುತ್ತಿರುವುದು ದುರಂತ. ಧರ್ಮ ಜಾಗೃತಿ ಸಹಿತವಾದ ಶಿಕ್ಷಣ ಇಂದಿನ ಅಗತ್ಯ ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿನಿಯರಾದ ಮಹಿಮಾ ಹೆಗಡೆ ಹಾಗೂ ಅಂಕಿತಾ ಪ್ರಾರ್ಥಿಸಿದರು. ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಸ್ವಾಗತಿಸಿದರು. ಐಕ್ಯುಎಸಿ ಘಟಕದ ಮುಖ್ಯಸ್ಥ ಚಂದ್ರಕಾಂತ ಗೋರೆ ವಂದಿಸಿದರು. ಉಪನ್ಯಾಸಕ ಗಿರೀಶ ಭಟ್ ಇಳಂತಿಲ ಕಾರ್ಯಕ್ರಮ ನಿರ್ವಹಿಸಿದರು. ಸಭಾಕಾರ್ಯಕ್ರಮದ ತರುವಾಯ ಶ್ರೀಕೃಷ್ಣಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top