ದೆಹಲಿ : ಸೆ.18 ರಂದು ಸಂಸತ್ತಿನ ವಿಶೇಷ ಅಧಿವೇಶನ ಆರಂಭಗೊಳ್ಳಲಿದ್ದು, ಮೊದಲ ದಿನದ ಅಧಿವೇಶನ ಹಳೆಯ ಸಂಸತ್ತಿನ ಕಟ್ಟಡದಲ್ಲಿ ನಡೆಯಲಿದೆ. ಸೆ.19ರಂದು ಗಣೇಶ ಚತುರ್ಥಿ ದಿನ ಅಧಿವೇಶನ ಸಂಸತ್ತಿನ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಲಿದೆ ಎಂದು ಎಎನ್‌ಐ ತಿಳಿಸಿದೆ.
ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನ ಸೆ.18ರಿಂದ 22ರವರೆಗೆ ನಡೆಯಲಿದೆ. ಅಧಿವೇಶನದಲ್ಲಿ ‘ಇಂಡಿಯಾ’ವನ್ನು ‘ಭಾರತ’ ಎಂದು ಬದಲಾಯಿಸಲು ಸಂಸತ್ತಿನಲ್ಲಿ ನಿರ್ಣಯ ತರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಸಂಸತ್ತಿನ ವಿಶೇಷ ಅಧಿವೇಶನವನ್ನು ಸರಕಾರ ಕರೆದ ಬಗ್ಗೆ ಪ್ರತಿಕ್ರಿಯಿಸಿದ ಪ್ರತಿಪಕ್ಷಗಳು, ಸರಕಾರ ನೈಜ ಸಮಸ್ಯೆಗಳಿಂದ ಜನರ ದಿಕ್ಕನ್ನು ಬೇರೆಡೆ ಸೆಳೆಯಲು ನಡೆಸುವ ಪ್ರಯತ್ನದ ಭಾಗವಾಗಿದೆ ಎಂದು ಹೇಳಿದೆ. ಇದಲ್ಲದೆ ವಿಶೇಷ ಅಧಿವೇಶನ ಪ್ರಾರಂಭಿಸುವ ಬಗ್ಗೆ ವಿರೋಧ ಪಕ್ಷಗಳ ಜೊತೆ ಮಾತುಕತೆ ನಡೆಸಿಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ರೀತಿಯಲ್ಲ ಎಂದು ಪ್ರತಿಪಕ್ಷಗಳು ಹೇಳಿದೆ.
ಪ್ರತಿಪಕ್ಷಗಳ ಜೊತೆ ಚರ್ಚಿಸದೆ ಸಂಸತ್ತಿನ ವಿಶೇಷ ಅಧಿವೇಶನ ಕರೆಯಲಾಗಿದ್ದರೂ, ಇಂಡಿನಾ ಒಕ್ಕೂಟ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಭಾಗವಹಿಸಲಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಅವರು ಹೇಳಿದ್ದಾರೆ. ಅಧಿವೇಶನದಲ್ಲಿ ವಿರೋಧ ಪಕ್ಷಗಳಿಗೆ ಜನರ ಸಮಸ್ಯೆ ಬಗ್ಗೆ ಧ್ವನಿ ಎತ್ತಲು ಅವಕಾಶ ಸಿಗುತ್ತದೆ ಎಂಬ ಭಾವನೆಯೊಂದಿಗೆ ನಾವು ಅಧಿವೇಶನದಲ್ಲಿ ಭಾಗವಹಿಸುತ್ತೇವೆ ಎಂದು ಹೇಳಿದ್ದಾರೆ.