ಬೆಳ್ತಂಗಡಿ : ಸೌಜನ್ಯ ಹೋರಾಟದ ಕಿಚ್ಚು ದೇಶಾದ್ಯಂತ ಕಾಡಿಚ್ಚಿನಂತೆ ಭೀಕರವಾಗಿ ಹಬ್ಬುತ್ತಿದ್ದಂತೆಯೇ ಅತ್ತ ಜಾಗತಿಕವಾಗಿಯೂ ಮುಗ್ಧ ಹೆಣ್ಣು ಮಗಳಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಹಲವು ಸಂಘಟನೆಗಳು ಹೋರಾಟದತ್ತ ಮುಖ ಮಾಡಿವೆ.
ಹಿಂದೂ ಹುಲಿ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ಈಗಾಗಲೇ ಬೃಹತ್ ಪ್ರತಿಭಟನೆಗಳು ನಡೆದಿವೆ. ನಿನ್ನೆಯಷ್ಟೇ ಬೆಳ್ತಂಗಡಿಯಲ್ಲಿ ನಡೆದ ಸೌಜನ್ಯ ಪರ ಬೃಹತ್ ಪ್ರತಿಭಟನಾ ಸಭೆಯಲ್ಲಿ ಸಾಮಾಜಿಕ ಹೋರಾಟಗಾರ್ತಿ, ಸೌಜನ್ಯ ಹೋರಾಟದ ಅಧ್ಯಕ್ಷೆ ಪ್ರಸನ್ನ ರವಿ, ಸಾಮಾಜಿಕ ಹೋರಾಟಗಾರ ಗಿರೀಶ್ ಮಟ್ಟಣ್ಣವರ್, ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸಹಿತ ಇತರರು ಸೌಜನ್ಯಳಿಗೆ ನ್ಯಾಯ ಸಿಗಬೇಕೆಂದು ಗುಡುಗಿದ್ದರು.
ಇದೀಗ ಜಾತಿ ಮತ ಭೇದವಿಲ್ಲದೆ ಎಲ್ಲರೂ ಸೌಜನ್ಯ ಪರ ಹೋರಾಟದಲ್ಲಿ ಭಾಗಿಯಾಗುತ್ತಿದ್ದು, ಇದೀಗ ಮುಸ್ಲಿಂ ಹೋರಾಟಗಾರರು ಧರ್ಮಯುದ್ಧಕ್ಕೆ ಧುಮುಕಿದ್ದಾರೆ. ಬೆಳ್ತಂಗಡಿಯಲ್ಲಿ ಸಾಗರೋಪಾದಿಯಲ್ಲಿ ನಿನ್ನೆ ಜನ ಸಾಗರ ಹರಿದು ಬಂದ ದಿನವೇ ಉಜಿರೆಯಲ್ಲಿ ಮುಸ್ಲಿಂ ವಿದ್ವಾಂಸ ರೋರ್ವರು ಗುಡುಗಿದ್ದಾರೆ.
ಸೆ.10 ರಂದು ಬೆಂಗಳೂರಿನಲ್ಲಿ ಎಸ್.ಎಸ್. ಎಫ್ ನ ಬೃಹತ್ ಸಮ್ಮೇಳನ ನಡೆಯಲಿದ್ದು ಅಲ್ಲಿ ಎಲ್ಲ ಮಂತ್ರಿಗಳ ಜತೆ, ಪಕ್ಷಗಳ ಜತೆ ಸೌಜನ್ಯಳಿಗೆ ನ್ಯಾಯ ಸಿಗಲು ಒತ್ತಡ ಹೇರುತ್ತೇವೆ. ಆಕೆಯ ಕೊಲೆಗೆ ಕಾರಣರಾದವರು ಎಷ್ಟೇ ಬಲಿಷ್ಠ ವ್ಯಕ್ತಿಯಾಗಿರಲಿ ಅವರನ್ನು ಹಿಡಿದು ಕಠಿಣ ಶಿಕ್ಷೆ ಒದಗಿಸಬೇಕು. ನಾವು ಯಾರ ಆಮಿಷಕ್ಕೂ ಒಳಗಾಗದೆ, ಯಾರ ಓಲೈಕೆಗೂ ಒಳಗಾಗದೆ ಈ ಪ್ರಕರಣಕ್ಕೆ ನ್ಯಾಯ ಒದಗಿಸಲು ಹೋರಾಡಲಿದ್ದೇವೆ ಎಂಬುದಾಗಿ ಅವರು ತಿಳಿಸಿದ್ದಾರೆ.