ಪುತ್ತೂರು : ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ಪುತ್ತೂರಿನಲ್ಲಿ ಪ್ರಥಮ ಬಿ.ಫಾರ್ಮ್ ಕಾಲೇಜು ವಿವೇಕಾನಂದ ಇನ್ಟ್ಸ್ ಟ್ಯೂಟ್ ಆಫ್ ಫಾರ್ಮಾಸ್ಯೂಟಿಕಲ್ ಸೈನ್ಸ್ ಉದ್ಘಾಟನಾ ಸಮಾರಂಭ ಸೋಮವಾರ ನಡೆಯಿತು.
ವಿವೇಕಾನಂದ ವಿದ್ಯಾವರ್ಧಕ ಸಂಘದ 80ನೇ ಸಂಸ್ಥೆಯಾಗಿದ್ದು, ಕಾಲೇಜಿನ ಕೇಶವ ಸಂಕಲ್ಪ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಶೈಕ್ಷಣಿಕ ವಿಭಾಗವನ್ನು ಭಾರತ ಸರಕಾರದ ರಾಜ್ಯ ಆರೋಗ್ಯ ಸಚಿವೆ ಡಾ.ಭಾರತಿ ಪ್ರವೀಣ್ ಪವಾರ್ ಉದ್ಘಾಟಿಸಿ ಮಾತನಾಡಿ, ಸಾಂಸ್ಕೃತಿಕವಾಗಿ ಶ್ರೀಮಂತಿಕೆಯಿಂದ ಕೂಡಿದ ಪುತ್ತೂರಿನ ಈ ಪ್ರದೇಶದಲ್ಲಿ ವೈದ್ಯಕೀಯ ಶಿಕ್ಷಣವನ್ನು ಕೊಡುವ ಸಂಸ್ಥೆ ಪ್ರಾರಂಭಗೊಂಡಿರುವುದು ಒಳ್ಳೆಯ ವಿಚಾರವಾಗಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದು ಸರ್ಕಾರದ ಗುರಿಯಾಗಿದೆ. ಪ್ರಧಾನ ಮಂತ್ರಿಗಳ ನೇತೃತ್ವದಲ್ಲಿ ಶಿಕ್ಷಣದ ಎಲ್ಲಾ ಕ್ಷೇತ್ರಗಳಿಗೂ ಒತ್ತು ನೀಡಿ ಅವುಗಳ ಸಂಖ್ಯೆಯನ್ನು ಉನ್ನತೀಕರಿಸಿದ್ದಾರೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಅಮೋಘ ಸಾಧನೆಯನು ಮಾಡಿದೆ. ಎಲ್ಲರೂ ಮುಂದುವರಿದ ಡಿಜಿಟಲ್ ಯುಗದಲ್ಲಿ ಬದುಕುತ್ತಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಭಾರತವು ಇಂದು ಹೊರದೇಶಗಳಿಗೆ ರಫ್ತು ಮಾಡುವಷ್ಟು ಬೆಳೆದಿದೆ. ಕೋವಿಡ್ -19 ನ ಸಂದರ್ಭದಲ್ಲಿ ತಯಾರಿಸಿದ ಔಷಧಿಯನ್ನು ಬೇರೆ ಬೇರೆ ರಾಷ್ಟ್ರಗಳು ಖರೀದಿಸಿ ಭಾರತೀಯ ವೈದ್ಯಕೀಯ ಶಕ್ತಿಯನ್ನು ಜಗತ್ತು ತಿಳಿಯಿತು. ಗ್ರಾಮಗಳಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರವನ್ನು ಆರಂಭಿಸಿ ಪ್ರತಿಯೊಬ್ಬರಿಗೂ ತಮ್ಮ ಸೇವೆಯನ್ನು ನೀಡುವುದೇ ನಮ್ಮ ಉದ್ದೇಶವಾಗಿದೆ ಎಂದರು
ಬೆಂಗಳೂರು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಸಿಂಡಿಕೇಟ್ ಸದಸ್ಯ ಡಾ. ರಾಮಚಂದ್ರ ಸೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಔಷಧೀ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಭಾರತ ತನ್ನ ಸಾಧನೆಯನ್ನು ಮೆರೆಯುತ್ತಿದೆ. ಭಾರತದ ಔಷಧೀಗಳು ಜಗತ್ತನ್ನೇ ಆಳುತ್ತಿದೆ. ಭಾರತ ಔಷಧಿ ವ್ಯವಸ್ಥೆಯಲ್ಲಿ ಮೂರನೇ ಸ್ಥಾನ ಮತ್ತು ಬೆಲೆಯಲ್ಲಿ ಐದನೇ ಸ್ಥಾನದಲ್ಲಿದೆ. ಕೈಗೆಟುಕುವ ಬೆಲೆಯಲ್ಲಿ ಔಷಧಿಯನ್ನು ತಯಾರಿಸುವ ಸಾಮರ್ಥ್ಯವನ್ನು ನಮ್ಮ ದೇಶವು ಹೊಂದಿದೆ. ಜಗತ್ತು ಭಾರತವನ್ನು ಗ್ಲೋಬಲ್ ಫಾರ್ಮಸಿ ಎಂದು ಗುರುತಿಸುತ್ತಿದೆ. ಔಷಧಿ ವಿಜ್ಞಾನಿಗಳ ತಪಸ್ಸಿನ ಫಲ. ಈ ಸಂಸ್ಥೆ ವಿಶ್ವ ಮಾನ್ಯತೆಯನ್ನು ಪಡೆಯಲಿ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಈ ಸಂಸ್ಥೆಯು ಸ್ವರ್ಗವಾಗಲಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕೆ.ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸಿ, ಇಂದು ಇಡೀ ಜಗತ್ತು ಭಾರತದತ್ತ ನೋಡುತಿದೆ. ಭಾರತದಲ್ಲಿರುವ ಹಲವು ಉತ್ತಮ ಅಂಶಗಳನ್ನು ವಿವಿಧ ರಾಷ್ಟ್ರಗಳು ತನ್ನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ನಮ್ಮ ದೇಶವು ಯಾರೂ ಯೋಚನೆ ಮಾಡದೇ ಇರುವುದನ್ನು ಯೋಚಿಸುತ್ತದೆ. ಭಾರತೀಯರು ಇಡೀ ಸಮಾಜದ ಜನರಿಗಾಗಿ ದುಡಿಯುವ ಮನಸ್ಥಿತಿಯನ್ನು ಹೊಂದಿದ್ದಾರೆ. ಔಷಧೀಯ ಕ್ಷೇತ್ರದಲ್ಲಿ ದಾಪುಗಾಲು ಇಡುವ ಪ್ರಯತ್ನ ಭಾರತ ಮಾಡಿದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಈ ವಿದ್ಯಾಸಂಸ್ಥೆಯು ಉತ್ತಮ ವೈದ್ಯಕೀಯ ಶಿಕ್ಷಣವನ್ನು ನೀಡಲಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್, ವಿವೇಕಾನಂದ ಇನ್ಸ್ಟ್ ಟ್ಯೂಟ್ ಸೈನ್ಸ್ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಗೋಪಿನಾಥ ಶೆಟ್ಟಿ, ಸಂಚಾಲಕ ಗೋವಿಂದ ಪ್ರಕಾಶ್ ಸಾಯ, ಪ್ರಾಂಶುಪಾಲ ಡಾ.ಗುರುರಾಜ ಎಂಪಿ. ಪಾಲ್ಗೊಂಡಿದ್ದರು.
ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ. ಕೃಷ್ಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶ್ರೀಲಕ್ಷ್ಮೀ ಮತ್ತು ತಂಡ ಪ್ರಾರ್ಥಿಸಿದರು. ಡಾ.ವಿಜಯ ಸರಸ್ವತಿ, ಸ್ಮಿತಾ ಕಾರ್ಯಕ್ರಮ ನಿರೂಪಿಸಿದರು.