ಮುಕ್ಕೂರು : ಬೌದ್ಧಿಕ ಪ್ರಬುದ್ದತೆಗೆ ಪುಸ್ತಕ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ವಿ.ಬಿ.ಅರ್ತಿಕಜೆ ಹೇಳಿದರು.
ಸುಳ್ಯ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಮತ್ತು ನಲಂದ ಪ್ರಕಾಶನ ಆಶ್ರಯದಲ್ಲಿ ಕಾನಾವಿನ ಕೋಡಿಬೈಲು ನಲಂದದಲ್ಲಿ ಸಾಹಿತ್ಯ ಸಂಪದ, ಉಪನ್ಯಾಸ, ಗೌರವಾರ್ಪಣೆ, ಭಾವಗಾನ ಮತ್ತು ಕವಿಗೋಷ್ಟಿ ಕಾರ್ಯಕ್ರಮವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಓದುವ ಹವ್ಯಾಸ ಬೆಳೆಸಿಕೊಂಡಾಗ ಬರವಣಿಗೆಯಲ್ಲಿಯು ಗಟ್ಟಿತನ ಮೂಡುತ್ತದೆ ಎಂದರು.
ಕೆಲವು ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತ್ಯದ ಗಂಧಗಾಳಿ ಗೊತ್ತಿಲ್ಲದವರು ಬರುವುದುಂಟು. ಸಂಬಂಧ, ಪರಿಚಯ ಎನ್ನುವ ಕಾರಣಕ್ಕೆ ಆಸಕ್ತಿ ಇಲ್ಲದಿದ್ದರೂ ಒತ್ತಾಸೆಯಿಂದ ಬರುತ್ತಾರೆ. ಆದರೆ ಕೋಡಿಬೈಲಿನಲ್ಲಿ ನಡೆದ ಸಾಹಿತ್ಯ ಚಟುವಟಿಕೆ ಆಸಕ್ತರೇ ಕೂಡಿಕೊಂಡು ನಡೆಸಿರುವ ಅಪರೂಪದ ಕಾರ್ಯಕ್ರಮ. ಇಂತಹ ಚಟುವಟಿಕೆಗಳೇ ಸಾಹಿತ್ಯದ ಬೆಳವಣಿಗೆಗೆ ಪೂರಕ ಎಂದರು.
ಸಾಮಾಜಿಕ ಬದ್ಧತೆ-ಸಾಹಿತ್ಯ ವಿಷಯದಲ್ಲಿ ಉಪನ್ಯಾಸ ನೀಡಿದ ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ಮುಖ್ಯಗುರು ರಾಮಕೃಷ್ಣ ಭಟ್ ಚೊಕ್ಕಾಡಿ, ಬದುಕಿನ ವಾಸ್ತವತೆಗಳನ್ನು ಅಳೆಯಬೇಕಾದರೆ ಸಾಹಿತ್ಯವೇ ಪ್ರಧಾನವಾದ ಅಂಶ. ಸಾಹಿತ್ಯ ಅಂದರೆ ಪುಸ್ತಕ ಬರೆಯವುದು, ಓದುವುದಷ್ಟಕ್ಕೆ ಮಾತ್ರ ಸೀಮಿತ ಅಲ್ಲ. ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವುದು ಕೂಡ ಅದರ ಭಾಗ. ಸಾಹಿತ್ಯ ಮತ್ತು ಮನುಷ್ಯನ ವ್ಯಕ್ತಿತ್ವ, ಸಾಹಿತ್ಯ ಮತ್ತು ವ್ಯಕ್ತಿ ಬೇರೆ ಅಲ್ಲ. ಅದು ಜತೆ ಜತೆಯಲ್ಲೇ ಇರುವಂತಹದು. ಬದುಕು ಮತ್ತು ಸಾಹಿತ್ಯ ಬೇರೆ ಬೇರೆ ಆಗಿರಲು ಸಾಧ್ಯವೇ ಇಲ್ಲ ಎಂದು ಅವರು ಅಭಿಪ್ರಾಯಿಸಿದರು.
ಸಣ್ಣ-ಸಣ್ಣ ವಿಷಯಗಳಿಗೆ ನಾವು ಹೇಗೆ ಗಮನ ನೀಡುತ್ತೇವೆ, ಹೇಗೆ ಅದನ್ನು ಬಳಸಿಕೊಳ್ಳುತ್ತೇವೆ ಅನ್ನುವುದರ ಮೇಲೆ ನಮ್ಮ ದೊಡ್ಡ ವ್ಯಕ್ತಿತ್ವಕ್ಕೆ ಅಡಿಪಾಯ ಆಗುತ್ತದೆ. ಹಾಗಾಗಿ ಸಣ್ಣ ವಿಷಯಗಳನ್ನು ಉಪೇಕ್ಷಿಸಬಾರದು. ಪ್ರಸ್ತುತ ಕಾಲಘಟ್ಟದಲ್ಲಿ ಮಕ್ಕಳಿಗೆ ದೊಡ್ಡ ಕನಸನ್ನು ಹೇರಿ ಅವರಲ್ಲಿ ಮಾನಸಿಕ ವೈಕಲ್ಯ ಉಂಟು ಮಾಡುತ್ತಿದ್ದೇವೆ. ಮಕ್ಕಳಿಗೆ ಆಕಾಂಕ್ಷೆಗಳನ್ನು ಹುಟ್ಟಿಸಬೇಕು ನಿಜ, ಆದರೆ ವಾಸ್ತವತೆಯನ್ನು ಮೀರಿದ ಸಾಧನೆಯ ನಿರೀಕ್ಷೆ, ಭ್ರಮೆಗಳನ್ನು ಹುಟ್ಟುಹಾಕಬಾರದು ಎಂದು ರಾಮಕೃಷ್ಣ ಭಟ್ ಅವರು ಅಭಿಪ್ರಾಯಿಸಿದರು.
ಸಭಾಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು ಮಾತನಾಡಿ, ದ.ಕ.ಜಿಲ್ಲೆಯ ತಾಲೂಕು ವ್ಯಾಪ್ತಿಗಳಲ್ಲಿ ಚುಟುಕು ಸಾಹಿತ್ಯ ಪರಿಷತ್ ಘಟಕಗಳನ್ನು ರಚಿಸಲಾಗಿದ್ದು ವಿವಿಧ ಕಾರ್ಯಕ್ರಮಗಳ ಮೂಲಕ ಸಾಹಿತ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ನಲಂದದಲ್ಲಿ ನಡೆದ ಕಾರ್ಯಕ್ರಮ ಅತ್ಯಂತ ಅಚ್ಚುಕಟ್ಟಾಗಿ, ಅರ್ಥಪೂರ್ಣವಾಗಿ ಅಭಿವ್ಯಕ್ತಗೊಂಡಿದೆ ಎಂದರು.
ಗೌರವಾರ್ಪಣೆ, ಭಾವಗಾನ
ಈ ಸಂದರ್ಭದಲ್ಲಿ ದ.ಕ.ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಬಿ.ಐತ್ತಪ್ಪ ನಾಯ್ಕ ಪುತ್ತೂರು, ಹಿರಿಯ ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ, ಪತ್ರಕರ್ತ ಕಿರಣ್ ಪ್ರಸಾದ್ ಕುಂಡಡ್ಕ ಅವರನ್ನು ನಲಂದ ನಿಲಯದವರ ಪ್ರಯುಕ್ತ ಗೌರವಿಸಲಾಯಿತು. ಇದೇ ಸಂದರ್ಭ ಚೈತ್ರಿಕಾ ಕೋಡಿಬೈಲು ಅವರಿಂದ ಭಾವಗಾನ ನಡೆಯಿತು.
ಕವಿಗೋಷ್ಟಿ
ಕವಿತಾ ಅಡೂರು, ವಿಶ್ವನಾಥ ಕುಲಾಲ್, ಅಶೋಕ ಕಡೇಶ್ವಾಲ್ಯ, ಭಾರತಿ ಸುರತ್ಕಲ್, ಗಣಪಯ್ಯ ಕೆ ವನಶ್ರೀ ಪೆರುವಾಜೆ, ನಾರಾಯಣ ಕೊಂಡೆಪ್ಪಾಡಿ, ಚಂದ್ರಾವತಿ ಬಡ್ಡಡ್ಕ, ಉದಯಭಾಸ್ಕರ ಸುಳ್ಯ, ಅನುರಾಧಾ ಉಬರಡ್ಕ, ನಿತಿನ್ ಮೇನಾಲ, ಅವನಿ ಕೋಡಿಬೈಲು, ಆತ್ಮೀಯ ಕೋಡಿಬೈಲು ಅವರು ಕವನ ವಾಚಿಸಿದರು.
ಆತ್ಮೀಯ ಕೋಡಿಬೈಲು ಪ್ರಾರ್ಥಿಸಿದರು.ಸಂಘಟಕ ರಾಮಚಂದ್ರ ಕೋಡಿಬೈಲು ಸಮ್ಮಾನಪತ್ರ ವಾಚಿಸಿದರು. ಸುಳ್ಯ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಅಶ್ವಿನಿ ಕೋಡಿಬೈಲು ಸ್ವಾಗತಿಸಿದರು. ಅವನಿ ಕೋಡಿಬೈಲು ನಿರೂಪಿಸಿದರು.