ಪುತ್ತೂರು: ನಮ್ಮ ಸಂಸ್ಕೃತಿಯನ್ನು ಅಧ್ಯಯನ ಮಾಡಿದಾಗ ನಂಬಿಕೆಗೆ ಪುಷ್ಟಿ ಕೊಡುತ್ತದೆ. ಈ ನಿಟ್ಟಿನಲ್ಲಿ ಎಲ್ಲವನ್ನು ತಿಳಿದು ಬೆಳೆಸುವಲ್ಲಿ ಮಾಡುವ ಆಚರಣೆಗೆ ಅರ್ಥ ಬರುತ್ತದೆ. ಈ ಉದ್ದೇಶವಿಟ್ಟುಕೊಂಡು ವಿಶ್ವ ಹಿಂದೂ ಪರಿಷತ್ ಕೆಲಸ ಮಾಡುತ್ತಿದೆ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆ ಹೇಳಿದರು.
ಅವರು ವಿಶ್ವ ಹಿಂದೂ ಪರಿಷತ್ ಹಾಗೂ ಮೊಸರು ಕುಡಿಗೆ ಉತ್ಸವ ಸಮಿತಿ ವತಿಯಿಂದ ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನಾಚರಣೆ ಅಂಗವಾಗಿ ದಿ.ನಿತಿನ್ ಕುಮಾರ್ ನಿಡ್ಪಳ್ಳಿ ಸ್ಮರಣಾರ್ಥ ಭಾನುವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ಮಕ್ಕಳಿಗೆ ನಡೆದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.
ಭಾರತ ಜ್ಞಾನ ಸಂಪನ್ನ ದೇಶವಾಗಿದ್ದು, ಋಷಿಮುನಿ, ಸಾಧು ಸಂತರು, ಜ್ಞಾನಿಗಳು ಜ್ಞಾನಮೂಲದಿಂದ ಭಾರತಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಈ ರೀತಿ ಸ್ಪರ್ಧೆ ಅನ್ನುವ ಯಾವುದೇ ಆಲೋಚನೆ ಇರದ ಮುಗ್ದ ಮಕ್ಕಳು, ಜ್ಞಾನಿಗಳು ಭಗವಂತನ ಹತ್ತಿರವಾಗುತ್ತಾರೆ. ಇವೆಲ್ಲವನ್ನು ತಿಳಿದು ಬೆಳೆಸುವಲ್ಲಿ ಆಚರಣೆಗೆ ಅರ್ಥ ಬರುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಉದ್ಯಮಿ ಕಾವ್ಯ ಕೆ. ಶೆಟ್ಟಿ ಶುಭ ಹಾರೈಸಿದರು. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷೆ ಪ್ರೇಮಲತಾ ರಾವ್ ಅಧ್ಯಕ್ಷತೆ ವಹಿಸಿದ್ದರು. ಜಯಲಕ್ಷ್ಮೀ ಪ್ರಾರ್ಥಿಸಿದರು. ಸುಕೀರ್ತಿ ಸ್ವಾಗತಿಸಿದರು. ವಿಶಾಖ್ ರೈ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿದ ಮಕ್ಕಳಿಗೆ ಕೃಷ್ಣವೇಷ ಸ್ಪರ್ಧೆ ನಡೆಯಿತು.