ಬೆಳ್ತಂಗಡಿ: ಹನ್ನೊಂದು ವರ್ಷಗಳ ಹಿಂದೆ ಧರ್ಮಸ್ಥಳದ ಮಣ್ಣಸಂಕದಲ್ಲಿ ಅತ್ಚಾಚಾರಕ್ಕೀಡಾಗಿ ಕೊಲೆಯಾದ ಸೌಜನ್ಯ ಪ್ರಕರಣದ ನೈಜ ಆರೋಪಿಗಳ ಪತ್ತೆಗಾಗಿ ಮರು ತನಿಖೆಗೆ ಆಗ್ರಹಿಸಿ ಬೆಳ್ತಂಗಡಿ ಪ್ರಜಾಪ್ರಭುತ್ವ ವೇದಿಕೆ ಹಾಗೂ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಮೈದಾನದಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಜನಸ್ತೋಮ ಹರಿದು ಬರುತ್ತಿದೆ.

ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆ ಮುಖಂಡ ಮಹೇಶ್ ತಿಮರೋಡಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ನೈಜ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ, ಆರೋಪಿಗಳ ರಕ್ಷಣೆಯಲ್ಲಿ ತೊಡಗಿರುವವರಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಗಳು ಕೇಳಿ ಬಂದಿದೆ.

ಸಭೆಯಲ್ಲಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿಯವರು ಉಪಸ್ಥಿತರಿದ್ದು, ಸೌಜನ್ಯ ತಾಯಿ ಕುಸುಮಾವತಿ ಚಂದಪ್ಪ ಗೌಡ, ಶ್ರೀರಾಮ ಸೇನೆ ನಾಯಕ ಪ್ರಮೋದ್ ಮುತಾಲಿಕ್, ಸಾಮಾಜಿಕ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್, ಮಾನವ ಹಕ್ಕುಗಳ ಆಯೋಗದ ಅಂತರಾಷ್ಟ್ರೀಯ ಕಾರ್ಯದರ್ಶಿ ಗೀತಾ, ನ್ಯಾಯವಾದಿ ಮೋಹಿತ್ ಕುಮಾರ್ ಪುತ್ತೂರು, ಮಹಿಳಾ ಹೋರಾಟಗಾರ್ತಿ ಪ್ರಸನ್ನರವಿ, ತುಳು ಸಂಸ್ಕೃತಿಕ ಚಿಂತಕ ತಮ್ಮಣ್ಣ ಶೆಟ್ಟಿ, ಒಡನಾಡಿ ಸಂಸ್ಥೆಯ ಪರಶುರಾಮ್, ನಿರಪರಾಧಿ ಸಂತೋಷ್ ರಾವ್ ಸಹೋದರ ಸಂಜಯ್ ರಾವ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದಾರೆ.