ಪುತ್ತೂರು : ನಮ್ಮ ಹಿರಿಯರಲ್ಲಿ ವೈಜ್ಞಾನಿಕ ಮನೋಭಾವ ಆಗಲೇ ಇತ್ತು. ಅದು ಇಂದು ಸಂಶೋಧನಾ ರೂಪದಲ್ಲಿ ಜಗತ್ತಿನ ವೈಜ್ಞಾನಿಕ ಅಭಿವೃದ್ಧಿಗೆ ಸಹಕಾರಿಯಾಗುತ್ತಿದೆ. ಭಾರತೀಯ ವಿಜ್ಞಾನಿಗಳ ವೈಜ್ಞಾನಿಕ ಸಂಶೋಧನೆ ಅದು ಜಗತ್ತಿನ ಹಿತಕ್ಕಾಗಿ ಆಗಿರುತ್ತದೆ. ಅದರಿಂದ ವಿಜ್ಞಾನಿಗಳ ಮನಸ್ಸಿಗೆ ಸಂತೃಪ್ತತೆ ಸಿಗುತ್ತದೆ. ಚಂದ್ರಯಾನ-3 ರ ಯಶಸ್ಸು ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಇಂದಿನ ಪ್ಲಾಸ್ಮಾ ತಂತ್ರಜ್ಞಾನ ಕುರಿತಾದ ಈ ಕಾರ್ಯಕ್ರಮ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಸಹಕಾರಿ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.

ಅವರು ಪ್ಲಾಸ್ಮಾ ಸಂಶೋಧನಾ ಕೇಂದ್ರ, ಅಹಮದಾಬಾದ್ ಮತ್ತು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ( ಸ್ವಾಯತ್ತ) ಪುತ್ತೂರು, ಐಕ್ಯುಎಸಿ ಮತ್ತು ವಿಜ್ಞಾನ ಸಂಘದ ಸಹಯೋಗದಲ್ಲಿ ನಡೆದ ಪ್ಲಾಸ್ಮಾ ತಂತ್ರಜ್ಞಾನದ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪೂನಾ ಜಿ.ಎಮ್. ಆರ್. ಟಿ ವೀಕ್ಷಣಾಲಯ, ಟಾಟಾ ಮೂಲಭೂತ ಸಂಶೋಧನಾ ಕೇಂದ್ರದ ಡೀನ್ ಪ್ರೊ.ಈಶ್ವರ ಚಂದ್ರ ಸಿ.ಎಚ್ ಪ್ಲಾಸ್ಮಾ ತಂತ್ರಜ್ಞಾನದ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ತಂತ್ರಜ್ಞಾನ ಬೆಳವಣಿಗೆಗೊಳ್ಳುತ್ತಿರುವ ಈ ಸಂದರ್ಭದಲ್ಲಿ ನಮಗೆ ಸಂಶೋಧನೆ ನಡೆಸಲು ಹಲವಾರು ಅವಕಾಶಗಳಿವೆ. ನಾವು ಯಾವುದೇ ಸಂಶೋಧನೆಯನ್ನು ಪ್ರಾರಂಭಿಸಬೇಕಾದರೆ ಮೊದಲು ಅದರ ಮೂಲದಿಂದ ಆರಂಭಿಸಬೇಕು. ಹೊಸ ರೀತಿಯಲ್ಲಿ ಆವಿಷ್ಕಾರವನ್ನು ಮಾಡಬೇಕು. ನಮ್ಮಿಂದ ಯಾವ ಕಾರ್ಯ ಸಾಧ್ಯ ಎಂಬುದನ್ನು ನಾವು ಮೊದಲು ಯೋಚಿಸಬೇಕು, ಅದರಲ್ಲಿ ಮುಂದುವರಿಯಬೇಕು. ನಮ್ಮಲ್ಲಿರುವ ಅಳುಕನ್ನು ಹೋಗಲಾಡಿಸಿ ಆಸಕ್ತಿಯಿರುವ ಕ್ಷೇತ್ರದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಪ್ಲಾಸ್ಮಾ ತಂತ್ರಜ್ಞಾನದಿಂದ ಹಲವು ಪ್ರಯೋಜನಗಳಿವೆ. ಇದನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಇಂದಿನ ಕಾರ್ಯಕ್ರಮವು ಅಭಿನಂದನಾರ್ಹ ಎಂದರು.
ಅಹಮದಾಬಾದ್ ಸಮುದಾಯ ಸಂಪರ್ಕ ವಿಭಾಗ ಮುಖ್ಯಸ್ಥ ಡಾ. ಎ.ವಿ. ರವಿಕುಮಾರ್ ದಿಕ್ಸೂಚಿ ಭಾಷಣ ಮಾಡಿ, ಒಂದು ವಸ್ತುವನ್ನು ವೈಜ್ಞಾನಿಕವಾಗಿ ನೋಡುವ ದೃಷ್ಟಿಕೋನ ನಮಗೆ ಮನೆಯಿಂದಲೇ ಪ್ರಾರಂಭವಾಗುತ್ತದೆ. ನಮಗೆ ಯಾವುದೇ ವಿಷಯ ಗೊತ್ತಿಲ್ಲ ಎಂದು ಸುಮ್ಮನೆ ಇರಬಾರದು. ಬದಲಾಗಿ ಅದರ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ವಿಜ್ಞಾನ ಎಂಬುದು ಆಸಕ್ತಿದಾಯಕ ಮತ್ತು ಕುತೂಹಲದಾಯಕವಾದ ಕ್ಷೇತ್ರವಾಗಿದೆ. ನಾವು ವಿಜ್ಞಾನವನ್ನು ಕಲಿತು ಸಮಾಜಕ್ಕೆ ಏನನ್ನು ಮಾಡಬಹುದು ಎಂಬುದನ್ನು ಯೋಚಿಸಬೇಕು. ಪ್ಲಾಸ್ಮಾ ತಂತ್ರಜ್ಞಾನದ ಕುರಿತಾಗಿ ಹಲವಾರು ಸಂಗತಿಯನ್ನು ಇಂದಿನ ಪ್ರದರ್ಶನದಲ್ಲಿ ತಿಳಿದುಕೊಳ್ಳಲು ಸಾಧ್ಯ ಎಂದು ಹೇಳಿದರು.
ಕುಮಾರಸ್ವಾಮಿ ಪದವಿಪೂರ್ವ ಕಾಲೇಜು ಸುಬ್ರಮಣ್ಯ ಇದರ ಪ್ರಾಂಶುಪಾಲ ಮತ್ತು ಐ.ಐ.ಎಸ್. ಸಿ ನ ಹಿರಿಯ ವಿದ್ಯಾರ್ಥಿ ಮತ್ತು ಬ್ರಿಟನ್ ನಾಟಿಂಗ್ ಹ್ಯಾಮ್ ವಿಶ್ವವಿದ್ಯಾನಿಲಯದ ಸಂಶೋಧಕ ಡಾ. ಸಂಕೀರ್ತನ್ ಹೆಬ್ಬಾರ್ ಪ್ಲಾಸ್ಮಾ ವಸ್ತು ಪ್ರದರ್ಶನವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಮುದಾಯ ಸಂಪರ್ಕ ವಿಭಾಗದ ಮುಖ್ಯಸ್ಥ ಡಾ. ಎ.ವಿ ರವಿಕುಮಾರ್ ರನ್ನು ಸನ್ಮಾನಿಸಲಾಯಿತು. ಬಳಿಕ ವಿಚಾರ ಸಂಕಿರಣ ನಡೆಯಿತು. ಮೂರು ದಿನ ನಡೆಯಲಿರುವ ಪ್ಲಾಸ್ಮಾ ಪ್ರದರ್ಶನಕ್ಕೆ 2೦೦೦ ಹೆಚ್ಚು ವಿದ್ಯಾರ್ಥಿಗಳು ಆಗಮಿಸಲಿದ್ದಾರೆ.
ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ. ಎಂ. ಕೃಷ್ಣ ಭಟ್, ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಮತ್ತು ಹಿರಿಯ ವಿಜ್ಞಾನಿ ಎರ್ಮುಂಕ ಶಂಕರ ಜೋಯಿಸ, ಕಾಲೇಜು ಆಡಳಿತ ಮಂಡಳಿ ಕೋಶಾಧಿಕಾರಿ ಶ್ರೀ ನಿವಾಸ ಸಾಮಂತ, ಪರೀಕ್ಷಾಂಗ ಕುಲಸಚಿವ ಡಾ.ಶ್ರೀಧರ ಎಚ್.ಜಿ, ವಿಶೇಷ ಅಧಿಕಾರಿ ಮತ್ತು ಪ್ರಭಾರ ಪ್ರಾಂಶುಪಾಲ ಡಾ.ಶ್ರೀಧರ್ ನ್ಯಾಕ್ ಬಿ, ಐಕ್ಯುಎಸಿ ಘಟಕದ ಸಂಯೋಜಕ ಮತ್ತು ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಶಿವಪ್ರಸಾದ್ ಕೆ.ಎಸ್ ಉಪಸ್ಥಿತರಿದ್ದರು. ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯ ಸರಸ್ವತಿ ಸ್ವಾಗತಿಸಿ, ಕಲಾ ವಿಭಾಗದ ಡೀನ್ ಮತ್ತು ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ದುರ್ಗಾರತ್ನ.ಸಿ ವಂದಿಸಿದರು. ಉಪನ್ಯಾಸಕಿ ನಮೃತಾ ಕೆ.ಎನ್ ನಿರ್ವಹಿಸಿದರು.