ಪುತ್ತೂರು: ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಯವರ 169ನೇ ಜನ್ಮ ದಿನಾಚರಣೆ ಗುರುವಾರ ಆಡಳಿತ ಸೌಧದಲ್ಲಿರುವ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆಯಿತು.
ದೀಪ ಪ್ರಜ್ವಲನೆ ಮಾಡಿ, ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಮಾತನಾಡಿ, ನಾರಾಯಣ ಗುರುಗಳ ಮುಖ್ಯ ಸಂದೇಶಗಳಲ್ಲಿ ಒಂದೇ ಜಾತಿ, ಒಂದೇ ಮತ, ಒಂದೇ ಕುಲ ಸಾರುವ ಮೂಲಕ ಸಮಾಜದಲ್ಲಿನ ಸಾಮರಸ್ಯವನ್ನು ಹೋಗಲಾಡಿಸಿದವರು. ಅವರ ಸಂದೇಶ, ಆದರ್ಶಗಳ ಪಾಲನೆಯಾಗಬೇಕಾಗಿದೆ. ಅವರ ವ್ಯಕ್ತಿತ್ವವನ್ನು ಅಳವಡಿಸುವ ಮೂಲಕ ಮುಂದಿನ ಪೀಳಿಗೆಗೂ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು.
ಮುಖ್ಯ ಉಪನ್ಯಾಸ ನೀಡಿದ ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ಸಿ. ನಾರಾಯಣ್, ಬ್ರಹ್ಮಶ್ರೀ ನಾರಾಯಣ ಗುರುಗಳು ಧರ್ಮಜಾಗೃತಿ, ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡುವ ಮೂಲಕ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಿ, ಒಟ್ಟು ಕುಟುಂಬ ವ್ಯವಸ್ಥೆಯನ್ನು ಬಣ್ಣನೆ ಮಾಡುವ ಮೂಲಕ ಕ್ರಾಂತಿಯನ್ನೇ ಉಂಟು ಮಾಡಿದ್ದಾರೆ. ಕೇವಲ ಧರ್ಮ ಜಾಗೃತಿಗಾಗಿ, ಧಾರ್ಮಿಕ ನಂಬಿಕೆಗಾಗಿ ಮಾತ್ರ ಲಿಂಗ ಸ್ಥಾಪನೆ ಮಾಡದೆ ಪರಿಸರ ಸಂರಕ್ಷಣೆಯಡಿಯಲ್ಲಿ ಸ್ಥಾಪಿಸಿದ್ದಾರೆ. ಪ್ರಸ್ತುತ ಅವರ ಚಿಂತನೆಗಳು ಪ್ರಜ್ವಲಿಸುವುದಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಈ ನಿಟ್ಟಿನಲ್ಲಿ ಅವರ ಆದರ್ಶ, ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸುವ ಮೂಲಕ ಕಟ್ಟ ಕಡೆಯ ವ್ಯಕ್ತಿಯ ಬಗ್ಗೆಯೂ ಚಿಂತನೆ ಮಾಡಿ ಸೇವೆ ಒದಗಿಸಿದಾಗ ನಾರಾಯಣ ಗುರುಗಳ ಆದರ್ಶ, ಚಿಂತನೆಗಳಿಗೆ ಅರ್ಥ ಬರುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಮಾತನಾಡಿ, ನಾರಾಯಣ ಗುರುಗಳು ಕೇರಳದಲ್ಲಿ ಮಾಡಿದ ಕ್ರಾಂತಿ ಈ ಕಾಲ ಘಟ್ಟದಲ್ಲೂ ಪ್ರಸ್ತುತ. ಸಮಾಜ ಏಕತೆಯಿಂದ ಇದ್ದರೆ ಅದಕ್ಕೆ ನಾರಾಯಣ ಗುರುಗಳ ಆದರ್ಶ, ಚಿಂತನೆಗಳು ಕಾರಣ ಎಂದರು.
ವೇದಿಕೆಯಲ್ಲಿ ತಾಪಂ ಕಾರ್ಯನಿವರ್ಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ತಹಶೀಲ್ದಾರ್ ಲೋಕೇಶ್ ಉಪಸ್ಥಿತರಿದ್ದರು. ತಾಲೂಕು ಕಚೇರಿಯ ದಯಾನಂದ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.