ಪುತ್ತೂರು: ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ವಿವೇಕಾನಂದ ಪದವಿಪೂರ್ವ ಕಾಲೇಜು ಇದರ ಜಂಟಿ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಬಾಲಕ ಮತ್ತು ಬಾಲಕಿಯರ ಚೆಸ್ ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮವು ಕಾಲೇಜಿನ ನೇತಾಜಿ ಸಭಾ ಭವನದಲ್ಲಿ ನಡೆಯಿತು.
ವಿಟ್ಲ ಸರಕಾರಿ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶೇಷಪ್ಪ ಗೌಡ ಪಂದ್ಯಾಟ ಉದ್ಘಾಟಿಸಿ ಮಾತನಾಡಿ, ಚದುರಂಗ ಅದೃಷ್ಟವನ್ನು ಅವಲಂಬಿಸಿದ ಆಟವಲ್ಲ. ಶುದ್ಧವಾಗಿ ಆಟಗಾರರ ಆಲೋಚನೆ, ಯೋಜನಾ ಸಾಮರ್ಥ್ಯ ಮತ್ತು ಮುಂದಾಲೋಚನೆಗಳನ್ನು ಅವಲಂಬಿಸಿದ ಆಟ. ಸ್ಪರ್ಧಾತ್ಮಕ ಯುಗದಲ್ಲಿ ಇಂತಹ ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವವನ್ನು ಮೂಡಿಸಲು ಸಹಾಯ ಮಾಡುತ್ತದೆ. ಶಾಲಾ ಕಾಲೇಜು ಮಟ್ಟದ ಕ್ರೀಡಾ ಕೂಟಗಳಿಂದ ಸ್ನೇಹ ಸೌಹಾರ್ದತೆಗಳು ಏರ್ಪಡುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಆಡಳಿತ ಮಂಡಳಿ ಸದಸ್ಯ ಡಾ. ಕೃಷ್ಣಪ್ರಸನ್ನ ಮಾತನಾಡಿ, ರಾಷ್ಟ್ರೀಯ ಕ್ರೀಡಾ ದಿನದ ಹಿನ್ನೆಲೆ ಮತ್ತು ಚೆಸ್ ಪಂದ್ಯಾಟದ ಮಹತ್ವನ್ನು ತಿಳಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಶುಭ ಹಾರೈಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್ ಕಾರ್ಯಕ್ರಮವನ್ನು ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕಿ ಡಾ. ಜ್ಯೋತಿ ಸ್ವಾಗತಿಸಿ ಯತೀಶ್ ವಂದಿಸಿದರು.
ಜಿಲ್ಲೆಯ ಸುಮಾರು 19 ಕಾಲೇಜುಗಳ ತಂಡವು ಸ್ಫರ್ಧೆಯಲ್ಲಿ ಭಾಗವಹಿಸಿದ್ದವು. ಬಾಲಕರ ವಿಭಾಗದಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ಪ್ರಥಮ ಸ್ಥಾನ ಮತ್ತು ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜು ದ್ವಿತೀಯ ಸ್ಥಾನ ಗಳಿಸಿದೆ. ಬಾಲಕಿಯರ ವಿಭಾಗದಲ್ಲಿ ಉಜಿರೆಯ ಎಸ್.ಡಿ.ಎಂ ಪದವಿಪೂರ್ವ ಕಾಲೇಜು ಪ್ರಥಮ ಸ್ಥಾನ ಮತ್ತು ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜು ದ್ವಿತೀಯ ಸ್ಥಾನ ಗಳಿಸಿದೆ.