ರಾಜಸ್ಥಾನ: ರಾಜಸ್ಥಾನದ ಕೋಟಾದಲ್ಲಿ ಮತ್ತೆ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ದೇಶದ ಮಹತ್ವಾಕಾಂಕ್ಷಿ ಕೋರ್ಸ್‌ಗಳಾದ ಎಂಜಿನಿಯರ್, ವೈದ್ಯಕೀಯ ಪ್ರವೇಶಾತಿ ಪರೀಕ್ಷೆ ಮತ್ತು ನಾಗರಿಕ ಸೇವೆಗಳ ಪರೀಕ್ಷೆಗಳ ತರಬೇತಿಯ ಕೇಂದ್ರವಾದ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚಳ ಆತಂಕಕ್ಕೆ ಕಾರಣವಾಗಿದೆ.
ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ನೀಟ್ ಪರೀಕ್ಷೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದ ಅವಿಷ್ಕರ್ ಶುಭಾಂಗಿ ಮತ್ತು ಬಿಹಾರದ ವಿದ್ಯಾರ್ಥಿ ಆದರ್ಶ್ ಆತ್ಮಹತ್ಯೆ ಮಾಡಿಕೊಂಡವರು.
ಅವಿಷ್ಕರ್ ಶುಭಾಂಗಿ ಮಹಾರಾಷ್ಟ್ರ ಮೂಲದವರಾಗಿದ್ದು, ಕೋಟಾದಲ್ಲಿ ತನ್ನ ಅಜ್ಜಿಯೊಂದಿಗೆ ನೆಲೆಸಿದ್ದರು. ಪರೀಕ್ಷೆ ಬರೆದ ಬಳಿಕ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನ ಆರನೇ ಮಹಡಿಯಿಂದ ಜಿಗಿದಿದ್ದ ಅವಿಷ್ಕರ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಜೆ ಕೋಟಾದ ಕುಣಡ್ಡಿಯಲ್ಲಿ ಬಿಹಾರ ಮೂಲದ ವಿದ್ಯಾರ್ಥಿ ಆದರ್ಶ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದರಿಂದ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಸಂಖ್ಯೆ ಈ ವರ್ಷ 23 ಕ್ಕೆ ಏರಿಕೆಯಾಗಿದೆ. ಕಳೆದ ವಾರ ಜ್ವರದ 15 ಮಾತ್ರೆಗಳನ್ನು ಸೇವಿಸಿದ ನಂತರ ವಿದ್ಯಾರ್ಥಿಯೊಬ್ಬ ಆಸ್ಪತ್ರೆಗೆ ದಾಖಲಾಗಿದ್ದನು. ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಗಳಿಸಿದ ನಂತರ ಅವರು ಖಿನ್ನತೆಗೆ ಒಳಗಾಗಿದ್ದ ಎಂದು ಅವರ ಸ್ನೇಹಿತ ಹೇಳಿದ್ದಾರೆ.
ಕೋಟಾದಲ್ಲಿನ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ಬಾಲ್ಕನಿಗಳಲ್ಲಿ ಬಲೆಗಳನ್ನು ಅಳವಡಿಸಲಾಗುತ್ತಿದೆ. ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳ ಮೇಲೆ ನಿಗಾ ಇಡುವ ಜೊತೆಗೆ ಕೌನ್ಸಿಲಿಂಗ್ ಕೂಡ ಮಾಡಲಾಗುತ್ತಿದೆ. ಕೋವಿಡ್ ಬಳಿಕ ಕೋಟಾದಲ್ಲಿ ಆತ್ಮಹತ್ಯೆಗಳು ಶೇಕಡಾ 60 ರಷ್ಟು ಹೆಚ್ಚಾಗಿದೆ ಎಂದು ಇತ್ತೀಚಿನ ಡೇಟಾ ತೋರಿಸುತ್ತಿದೆ ಎಂದು ಎನ್ ಡಿಟಿವಿ ವರದಿ ಮಾಡಿದೆ.