ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದ 35ನೇ ವಾರ್ಷಿಕೋತ್ಸವ ನಡೆಯಿತು.
ಮುಖ್ಯ ಅತಿಥಿಯಾಗಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸವಣೂರು ವಿಶ್ವಜಿತ್ ಶೆಟ್ಟಿ, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ ಮಾಡಿ ಮಾತನಾಡಿ, ಭಾರತೀಯ ಸಂವಿಧಾನದಲ್ಲಿನ್ಯಾಯಾಂಗಕ್ಕೆ ಅತ್ಯಮೂಲ್ಯ ಸ್ಥಾನವಿದೆ. ದೇಶದ ಅಭಿವೃದ್ಧಿಯಲ್ಲಿನ್ಯಾಯಾಂಗ ವ್ಯವಸ್ಥೆ ಪರಿಣಾಮಕಾರಿಯಾಗಿದ್ದು, ಇಡೀ ವಿಶ್ವದಲ್ಲಿಯೇ ಭಾರತೀಯ ನ್ಯಾಯಾಂಗ ವ್ಯವಸ್ಥೆ ಸರ್ವ ಶ್ರೇಷ್ಠ ಹಾಗೂ ಸದೃಢವಾಗಿದೆ. ಕಾನೂನು ವಿದ್ಯಾರ್ಥಿಗಳಿಗೆ ಇದನ್ನು ಅರ್ಥ ಮಾಡಿಕೊಂಡು ಆ ವ್ಯವಸ್ಥೆಯೊಳಗೆ ಜ್ಞಾನವಂತರಾಗಿ ಬರಬೇಕು ಎಂದರು. ವಿವಿಧ ಹಂತಗಳ ನ್ಯಾಯಾಲಯದ ಕಾರ್ಯಕಲಾಪಗಳನ್ನು ನೋಡಿಕೊಂಡು, ಅದರ ಮಹತ್ವವನ್ನು ಅರಿತುಕೊಂಡು ಬರಬೇಕು ಎಂದರು. ದೇಶದ ರಕ್ಷಣೆ ನೊಗ ಹೊತ್ತ ಸೈನಿಕ ಗಡಿ ಕಾದರೆ ವಕೀಲರು ಸಮಾಜ ಕಾಯುವುದರ ಜತೆಗೆ ದೀನ ದಲಿತರಿಗೆ ಹಾಗೂ ನಿರ್ಗತಿಕರಿಗೆ ನ್ಯಾಯ ಒದಗಿಸುವ ಕಾರ್ಯ ಮಾಡುತ್ತಾರೆ. ದಾರಿ ತಪ್ಪಿದ ವ್ಯಕ್ತಿ ಹಾಗೂ ಸಮಾಜವನ್ನು ಸರಿದಾರಿಗೆ ತರುವ ಪ್ರಯತ್ನವನ್ನು ವಕೀಲರು ಮಾಡುತ್ತಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ. ಎಂ ಕೃಷ್ಣ ಭಟ್ ಮಾತನಾಡಿ, ಕಾನೂನು ಅಭ್ಯಾಸ, ಮಾಹಿತಿ ಇಲ್ಲದೆ ವಕೀಲ ವೃತ್ತಿ ಮಾಡುವುದಕ್ಕೆ ಸಾಧ್ಯವೇ ಇಲ್ಲ. ಕಾನೂನು ಅರಿವೇ ಪ್ರಮುಖ ಸಾಮರ್ಥ್ಯ. ಹಾಗಾಗಿ ಕಾನೂನು ವಿದ್ಯಾರ್ಥಿಗಳು ಸದಾ ಅಧ್ಯಯನಶೀಲರಾಗಬೇಕು. ಜೊತೆಗೆ ಸಮಾಜಕ್ಕೆ ನಿಸ್ವಾರ್ಥ ಸೇವೆ ನೀಡಲು ಸದಾ ಸಿದ್ಧರಿರುವಂತಹ ಸುದೃಢ ವಕೀಲರು ತಯಾರಾಗಬೇಕು. ಅಂತಹ ಕಾನೂನು ತಜ್ಞರನ್ನು ತಯಾರು ಮಾಡುವ ಕೆಲಸವನ್ನು ವಿವೇಕಾನಂದ ಕಾನೂನು ಮಹಾವಿದ್ಯಾಲಯ ಕಳೆದ 35 ವರ್ಷಗಳಿಂದ ಮಾಡುತ್ತಿದೆ ಎಂದು ತಿಳಿಸಿದರು.
ಇನ್ನೊರ್ವ ಅತಿಥಿ ಪುತ್ತೂರಿನ ಹಿರಿಯ ನ್ಯಾಯವಾದಿ ಎಂ. ರಾಮ್ ಮೋಹನ್ ರಾವ್ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಸವಣೂರು ವಿಶ್ವಜಿತ್ ಶೆಟ್ಟಿ ಯವರನ್ನು ಮಹಾವಿದ್ಯಾಲಯದ ವತಿಯಿಂದ ಗೌರವಿಸಲಾಯಿತು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ ಅಕ್ಷತಾ ಎ.ಪಿ. ವರದಿ ವಾಚಿಸಿದರು. ವಿದ್ಯಾರ್ಥಿ ಪರಿಷತ್ ನ ಅಧ್ಯಕ್ಷ ಅಭಿಷೇಕ್ ಲಾಲ್ ವಿದ್ಯಾರ್ಥಿ ಪರಿಷತ್ ನ ವಾರ್ಷಿಕ ವರದಿ ವಾಚಿಸಿದರು. ವೇದಿಕೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಂಚಾಲಕ ವಿಜಯನಾರಾಯಣ ಕೆ.ಎಂ., ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶಶಿಧರ್ ಬಿ.ಆರ್., ಕಾನೂನು ವಿಭಾಗದ ನಿರ್ದೇಶಕ ಡಾ. ರವೀಂದ್ರ ಬಿ. ಕೆ. ವಿದ್ಯಾರ್ಥಿ ಪರಿಷತ್ ನ ಪೂಜಾ ಕೆ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಸಂಗೀತಾ ಎಸ್. ಎಂ. ಸ್ವಾಗತಿಸಿ, ವಿದ್ಯಾರ್ಥಿ ಪರಿಷತ್ ನ ಪ್ರಜ್ವಲ್ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಸಂಧ್ಯಾ ಪಿ ಎಂ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ನ್ಯಾಯವಾದಿಗಳು, ವಕೀಲರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು, ಹಿರಿಯ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.