ಧರ್ಮಸ್ಥಳ : ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ಈಗಾಗಲೇ ಧರ್ಮಸ್ಥಳ ಅಣ್ಣಪ್ಪ ಸ್ವಾಮಿ ಬೆಟ್ಟದ ಬಳಿ ತಲುಪಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರಿದ್ದಾರೆ.
ನೇತ್ರಾವತಿ ಸ್ನಾನಘಟ್ಟದಿಂದ ಧರ್ಮಸ್ಥಳದಲ್ಲಿರುವ ಅಣ್ಣಪ್ಪ ಸ್ವಾಮಿ ಬೆಟ್ಟದ ವರೆಗೆ ನಡೆದ ಪಾದಯಾತ್ರೆಯಲ್ಲಿ ಸೌಜನ್ಯಳ ತಾಯಿ ಕುಸುಮಾವತಿ ಜತೆ ವಿಹಿಂಪ, ಬಜರಂಗದಳ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಜಿಲ್ಲಾ ಎಸ್ ಪಿ ರಿಷ್ಯಂತ್ ಅವರೇ ಬಂದೋಬಸ್ತಿನ ಉಸ್ತುವಾರಿ ವಹಿಸಿದ್ದಾರೆ. ಧರ್ಮಸ್ಥಳ ಸುತ್ತಮುತ್ತಲಿನ ಜನ ಬೃಹತ್ ಸಂಖ್ಯೆಯಲ್ಲಿ ಜಮಾಯಿಸಿದ್ದು, ಸೌಜನ್ಯಳ ತಾಯಿ ಕುಸುಮಾವತಿ ಅವರು ಧರ್ಮಸ್ಥಳಕ್ಕೆ ಪ್ರವೇಶಿಸುವುದಕ್ಕೆ ಅಲ್ಲಿನ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದಾಗ ಗ್ರಾಮಸ್ಥರು ಹಾಗೂ ಪೊಲೀಸರೊಂದಿಗೆ ಸಣ್ಣ ಮಟ್ಟಿನ ಮಾತಿನ ಚಕಮಕಿಯೂ ನಡೆದಿದೆ ಎಂದು ತಿಳಿದು ಬಂದಿದೆ.
ಬಳಿಕ ಕುಸುಮಾವತಿ ಅವರಿಗೆ ಅಣ್ಣಪ್ಪ ಬೆಟ್ಟದ ಮುಂಭಾಗ ತೆರಳಲು ಅನುಮತಿ ನೀಡಿದ ಬಳಿಕ ಕುಸುಮಾವತಿ ಅವರು ಕೈ ಮುಗಿದು ಪ್ರಾರ್ಥಿಸಿ ತಮ್ಮ ಮಗಳ ಸಾವಿಗೆ ನ್ಯಾಯದೊರಕಿಸಿಕೊಟ್ಟು ನಿಜವಾದ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಹಿಂದು ಸಂಘಟನೆಗಳ ಮುಖಂಡರ ಜತೆ ಪ್ರಾರ್ಥಿಸಿದರು. ಈ ಮೊದಲು ಕುಸುಮಾವತಿ ಅವರು ಆರೋಪಿಗಳೆಂದು ಹೇಳುತ್ತಿರುವ ಧೀರಜ್ ಕೆಲ್ಲ, ಉದಯ್ ಜೈನ್, ಧೀರಜ್ ಜೈನ್ ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂದೆ ತಾವು ನಿರಪರಾಧಿಗಲೆಂದು ಹೇಳಿಕೊಂಡರು.
ಕೊನೆಗೂ ಉದ್ವಿಗ್ನತೆಯಿಂದ ಕೂಡಿದ ಪಾದಯಾತ್ರೆ ಶಾಂವಾಗಿ ಮುಕ್ತಾಯಗೊಂಡಿದೆ,.