ಪುತ್ತೂರು: ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಮರು ತನಿಖೆ ನಡೆಸಿ ನೈಜ ಆರೋಪಿಗಳನ್ನು ಪತ್ತೆಹಚ್ಚುವಂತೆ ಆಗ್ರಹಿಸಿ ಜಿಲ್ಲಾ ಮಟ್ಟದ ಧರಣಿ ಸತ್ಯಾಗ್ರಹವನ್ನು ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಸಲಾಗುವುದು ಎಂದು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ತಿಳಿಸಿದ್ದಾರೆ.
ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕುರಿತು ಸಭೆಯೊಂದನ್ನು ಏರ್ಪಡಿಸಿ ದಿನ ನಿಗದಿ ಮಾಡಲಾಗುವುದು. ಅಲ್ಲದೆ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳ ಗೌಡ ಸಮಿತಿಗಳ ಜಿಲ್ಲಾ ಒಕ್ಕೂಟವನ್ನು ರಚನೆ ಮಾಡಲಾಗಿದೆ. ಈ ಸಮಿತಿಗಳ ಮೂಲಕ ಮುಂದಿನ ಹೋರಾಟದ ರೂಪುರೇಷೆಗಳನ್ನು ಮಾಡಲಾಗುವುದು ಎಂದು ತಿಳಿಸಿದರು.
ಈಗಾಗಲೇ ಕೊಲೆ ಪ್ರಕರಣಕ್ಕ ಸಂಬಂಧಿಸಿದ ಸಂತೋಷ್ ರಾವ್ ನಿರಪರಾಧಿ ಎಂದು ಘೋಷಣೆಯಾಗಿದ್ದು, ನಿಜವಾದ ಆರೋಪಿ ಯಾರು ಎಂದು ಪ್ರಶ್ನಿಸಿರುವ ಅವರು, ಈ ಪ್ರಕರಣದಲ್ಲಿ ಸರಿಯಾದ ತನಿಖೆಯೇ ಆಗಿಲ್ಲ. ಈ ನಿಟ್ಟಿನಲ್ಲಿ ಪ್ರಕರಣ ತನಿಖಾಧಿಕಾರಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಆ.28 ರಂದು ಪುತ್ತೂರು ಅಭಿನವ ಭಾರತ ಮಿತ್ರಮಂಡಳಿ ಹಾಗೂ ಬೆಳ್ತಂಗಡಿ ಪ್ರಜಾಪ್ರಭುತ್ವ ವೇದಿಕೆ ಜಂಟಿ ಆಶ್ರಯದಲ್ಲಿ ಪುತ್ತೂರಿನಲ್ಲಿ ನಡೆಯುವ ಮೌನ ಮೆರವಣಿಗೆ ಹಾಗೂ ಬೃಹತ್ ಪ್ರತಿಭಟನಾ ಸಭೆಗೆ ನಮ್ಮ ಸಂಪೂರ್ಣ ಬೆಂಬಲವಿದ್ದು. ಈ ಪ್ರತಿಭಟನೆಯಲ್ಲಿ ಪ್ರಜ್ಞಾವಂತ ನಾಗರೀಕರು ಪಾಲ್ಗೊಳ್ಳುವಂತೆ ಅವರು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಸಲಹಾ ಸಮಿತಿ ಉಪಾಧ್ಯಕ್ಷ ಚಿದಾನಂದ ಬೈಲಾಡಿ, ಸಂಘದ ಪ್ರಧಾನ ಕಾರ್ಯದರ್ಶಿ ಸುಂದರ ಗೌಡ, ಮಹಿಳಾ ಸಂಘದ ಅಧ್ಯಕ್ಷೆ ಮೀನಾಕ್ಷಿ, ಸ್ವಸಹಾಯ ಒಕ್ಕೂಟದ ಅಧ್ಯಕ್ಷ ಎ.ವಿ.ನಾರಾಯಣ ಉಪಸ್ಥಿತರಿದ್ದರು.