ಆ.28 : ಬೆಳ್ತಂಗಡಿಯಲ್ಲಿ ಸೌಜನ್ಯ ಪರ ರಾಜ್ಯ ಮಟ್ಟದ ಹೋರಾಟ, ಮಹಾಧರಣಿ

ಬೆಳ್ತಂಗಡಿ : ಈಗಾಗಲೇ ಎಲ್ಲರಿಗೂ ತಿಳಿದಂತೆ ಧರ್ಮಸ್ಥಳದ ಪುಟ್ಟ ಹುಡುಗಿ ಸೌಜನ್ಯಳ ಕೊಲೆಯ ಆರೋಪಿಗಳ ಪತ್ತೆಗೆ ಆಗ್ರಹಿಸಿ ಜನಪರ ಸಂಘಟನೆಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಕರ್ನಾಟಕ ರಾಜ್ಯದ ಕರೆ ಚಲೋ ಬೆಳ್ತಂಗಡಿ ಕಾರ್ಯಕ್ರಮ ಆ.28 ರಂದು ಬೆಳ್ತಂಗಡಿ ತಾಲೂಕು ಕಚೇರಿ ಎದುರು ಮಹಾ ದರಣಿ ನಡೆಸುವ ಮೂಲಕ ನಡೆಯಲಿದೆ ಎಂದು ಪುತ್ತೂರು ತಾಲೂಕು  ಸಿಪಿಐ(ಎಂ) ನಾಯಕ ಪಿಕೆ ಸತೀಶನ್‌  ಮತ್ತು ಕರ್ನಾಟಕ ರಾಜ್ಯ ಋಣ ಮುಕ್ತ ಹೋರಾಟ ಸಮಿತಿ ಅಧ್ಯಕ್ಷ ಬಿ.ಎಂ.ಭಟ್‌ ಜಂಟಿ ಹೇಳಿಕೆಯಲ್ಲಿ ತಿಳಿದ್ದಾರೆ.

ಕೊಲೆಯಾದ ಸೌಜನ್ಯಳ ಪ್ರಕರಣದಲ್ಲಿ ಅಮಾಯಕ ಸಂತೋಷ್‌ ರಾವ್‌ ಅವರನ್ನು ಆರೋಪಿಯನ್ನಾಗಿಸಿ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನದ ವಿರುದ್ದ ಜನ ಅಂದೇ ಸಿಡಿದೆದ್ದರು.  ಆದರೆ ರಾಜ್ಯದ ಡಿವಿ ಸದಾನಂದ ಗೌಡರ ನೇತೃತ್ವದಲ್ಲಿದ್ದ ಬಿಜೆಪಿ ಸರಕಾರ ಆತನೇ ಆರೋಪಿ ಎಂದು ಹಟ ಹಿಡಿದಾಗ ರಾಜ್ಯ ಸರಕಾರದ ಮೇಲೆ ವಿಶ್ವಾಸ ಕಳಕೊಂಡ ನಾವು ಸಿಬಿಐ ತನಿಖೆಗೆ ಆಗ್ರಹಿಸುತ್ತಾ ಹೋರಾಟ ನಡೆಸಿದ್ದೆವು. ಆ ಸಂದರ್ಭ ನಡೆದ ಚುನಾವಣೆಯಲ್ಲಿ ಗೆದ್ದು ಬಂದ ಸಿದ್ದಾರಾಮಯ್ಯ ನೇತೃತ್ವದ ಕಾಂಗ್ರೇಸ್‌ ಸರಕಾರ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ವಿಧಾನ ಸಭೆಯಲ್ಲಿ ಕೂಡಾ ಬೆಳ್ತಂಗಡಿಯ ಆವಾಗಿನ ಶಾಸಕರು ಸಿಬಿಐ ತನಿಖೆಗೆ ಧ್ವನಿ ಎತ್ತಿದ್ದರು. ಒಂದು ವರ್ಷದಲ್ಲೇ ಚುನಾವಣೆ ಬಂದು ಕೇಂದ್ರದಲ್ಲಿದ್ದ ಯುಪಿಎ ಸರಕಾರ ಸೋತು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅದಿಕಾರಕ್ಕೆ ಬಂತು, ಸಿಬಿಐ ತನಿಖೆ ನಿದಾನಗತಿಯಲ್ಲಿ ನಡೆಯುತ್ತಾ 11 ವರ್ಷ ಕಳೆದ ಮೇಲೆ ತನ್ನ ತೀರ್ಪು ನೀಡಿದಾಗ ಸಂತೋಷ್‌ ರಾವ್‌ ನಿರಪರಾದಿ ಎಂಬುದು ಸಾಬೀತಾಗಿದೆ ವಿನಃ ನಿಜವಾದ ಆರೋಪಿಯ ಪತ್ತೆಗೆ ಸಿಬಿಐ ಯಾವ ತನಿಖೆ ನಡೆಸಿಲ್ಲ ಎಂಬುದು ಸಾಬೀತಾಗಿದೆ.

ಈಗ ರಾಜ್ಯದಲ್ಲಿ ಪುನಃ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್‌ ಸರಕಾರ ಅದಿಕಾರಕ್ಕೆ ಬಂದಿದೆ. ಕೇಂದ್ರ ಸರಕಾರದ ಹಿಡಿತದಲ್ಲಿದ್ದ ಸಿಬಿಐ ಸಂಸ್ಥೆಯು ನಿಜವಾದ ಆರೋಪಿಗಳ ಪತ್ತೆ ಮಾಡದ ಕಾರಣ ಪ್ರಕರಣವನ್ನು ರಾಜ್ಯ ಸರಕಾರ ಮತ್ತೆ ಸಿಬಿಐಯಿಂದ ಹಿಂಪಡೆದು ಎಸ್.ಐ.ಟಿ ಮೂಲಕ ತನಿಖೆ ನಡೆಸಬೇಕೆಂದೂ, ಬೆಳ್ತಂಗಡಿ ತಾಲೂಕಿನಲ್ಲಿ ನಡೆಯುತ್ತಿರುವ ಅಸಹಜ ಸಾವುಗಳ, ಪತ್ತೆಯಾಗದ ಕೊಲೆಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಜನಪರ ಸಮಾನ ಮನಸ್ಕ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಬೆಳ್ತಂಗಡಿ ಮಿನಿ ವಿಧಾನ ಸೌದ ಎದುರು ಮಹಾದರಣಿ ನಡೆಸಲಿದ್ದೇವೆ. ಜಿಲ್ಲೆಯ ಹೊರಗಿನಿಂದ ಸುಮಾರು 10,000 ಕ್ಕೂ ಮಿಕ್ಕಿ ಜನ ಭಾಗವಹಿಸುವ ಈ ದರಣಿಯಲ್ಲಿ ಜಿಲ್ಲೆಯ ಜನರೂ ದೋಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಸೌಜನ್ಯಳಿಗೆ ನ್ಯಾಯ ಒದಗಲು ಸಹಕರಿಸಲು ಜನತೆಗೆ ತಮ್ಮ ಮೂಲಕ ಮನವಿ ಮಾಡುತ್ತೇವೆ ಎಂದವರು ಕರೆ ನೀಡಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top