ಚಂದ್ರಯಾನ-3  ವಿಕ್ರಮ ಲ್ಯಾಂಡರ್ ಚಂದ್ರನ ನೆಲಕ್ಕಿಳಿದು ಇತಿಹಾಸ ಸೃಷ್ಟಿಸಲು ಕ್ಷಣಗಣನೆ | ಇಂದು ಸಂಜೆ 6.04 ಕ್ಕೆ ಚಂದ್ರನ ಮೇಲೆ ಕಾಲಿಡಲಿರುವ ಲ್ಯಾಂಡರ್

ಇಸ್ರೋ: ಇಂದು ಭಾರತದ ಐತಿಹಾಸಿಕ ಚಂದ್ರಚುಂಬನಕ್ಕೆ ಕ್ಷಣಗಣನೆ : ವಿಶ್ವದ ಕಣ್ಣು ಭಾರತದತ್ತ. ಆ ದಿನ ಬಂದೇ ಬಿಟ್ಟಿದೆ. ಚಂದ್ರಯಾನ-3 ಯೋಜನೆಯ ಭಾಗವಾಗಿರುವ ವಿಕ್ರಂ ಲ್ಯಾಂಡರ್‌ ಚಂದ್ರನ ನೆಲಕ್ಕಿಳಿದು ಇತಿಹಾಸ ಬರೆಯಲು ಸನ್ನದ್ಧವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸಂಜೆ 6.04 ನಿಮಿಷಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತ ಕಾಲೂರಲಿದೆ.

ಆ ದಿನ ಬಂದೇ ಬಿಟ್ಟಿದೆ. ಚಂದ್ರಯಾನ-3 ಯೋಜನೆಯ ಭಾಗವಾಗಿರುವ ವಿಕ್ರಂ ಲ್ಯಾಂಡರ್‌ ಚಂದ್ರನ ನೆಲಕ್ಕಿಳಿದು ಇತಿಹಾಸ ಬರೆಯಲು ಸನ್ನದ್ಧವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸಂಜೆ 6.04 ನಿಮಿಷಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತ ಕಾಲೂರಲಿದೆ. ತನ್ಮೂಲಕ ಅಲ್ಲಿಗೆ ತಲುಪಿದ ಮೊದಲ ದೇಶ ಎಂಬ ಶ್ರೇಯಕ್ಕೆ ಪಾತ್ರವಾಗಲಿದೆ. ಯೋಜನೆಯ ಹೊಣೆ ಹೊತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 140 ಕೋಟಿ ಭಾರತೀಯರ ಜೊತೆ ಈ ರೋಚಕ ಕ್ಷಣಕ್ಕಾಗಿ ಉಸಿರು ಬಿಗಿಹಿಡಿದು ಕಾದಿದ್ದರೆ, ಇಡೀ ವಿಶ್ವ ಭಾರತದತ್ತ ಕುತೂಹಲದ ದೃಷ್ಟಿ ನೆಟ್ಟಿದೆ.

🔸 600 ಕೋಟಿ: ಚಂದ್ರಯಾನ-3 ಯೋಜನೆ ಕೈಗೊಳ್ಳಲು ಇಸ್ರೋಗೆ ತಗುಲಿದ ವೆಚ್ಚ































 
 

🔸 ನಂ.4: ಲ್ಯಾಂಡರ್‌ ಇಳಿಕೆ ಯಶಸ್ವಿಯಾದರೆ ಚಂದ್ರನ ನೆಲಕ್ಕಿಳಿದ 4ನೇ ದೇಶ ಭಾರತ

🔸 ನಂ.1: ಅಲ್ಲದೆ, ಚಂದ್ರನ ದಕ್ಷಿಣ ಧ್ರುವ ತಲುಪಿದ ಮೊದಲ ದೇಶ ಆಗಲಿದೆ ಭಾರತ

🔸 41 ದಿನ: ಜು.14ಕ್ಕೆ ಭೂಮಿಯಿಂದ ಜಿಗಿದು 41 ದಿನ ಪಯಣಿಸಿರುವ ಚಂದ್ರಯಾನ ನೌಕೆ

🔸 3.84 ಲಕ್ಷ ಕಿಮೀ: ಕಳೆದ 41 ದಿನಗಳಲ್ಲಿ ಚಂದ್ರಯಾನ-3 ಕ್ರಮಿಸಿರುವ ಒಟ್ಟಾರೆ ದೂರ

🔸 1758 ಕೆ.ಜಿ.: ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿರುವ ವಿಕ್ರಂ ಲ್ಯಾಂಡರ್‌ನ ತೂಕ

🔸 26 ಕೆ.ಜಿ.: ಚಂದ್ರನ ನೆಲದ ಮೇಲೆ 14 ದಿನ ಓಡಾಡಲಿರುವ ಪ್ರಜ್ಞಾನ್‌ ರೋವರ್‌ ತೂಕ

🔸 5 ಉಪಕರಣ: ಲ್ಯಾಂಡರ್‌, ರೋವರಲ್ಲಿರುವ 5 ಉಪಕರಣ ಬಳಸಿ ಚಂದ್ರನ ಅಧ್ಯಯನ

ಎಲ್ಲ ಚೆನ್ನಾಗಿದೆ:ಇಸ್ರೋ

ನೌಕೆಯ ಎಲ್ಲ ಉಪಕರಣಗಳು ನಿರಂತರ ಕಣ್ಗಾವಲಿಗೆ ಒಳಪಟ್ಟಿವೆ. ಅವೆಲ್ಲವೂ ಸುಸ್ಥಿತಿಯಲ್ಲಿವೆ. ಲ್ಯಾಂಡರ್‌ ಉಪಕರಣ ಸುಲಲಿತವಾಗಿ ಚಲಿಸುತ್ತಿದೆ. ಎಲ್ಲವೂ ಪೂರ್ವಯೋಜಿತವಾಗಿ ನಡೆಯಲಿದೆ. ಚಂದ್ರನ ಮೇಲೆ ಇಳಿಯಲು ನಾವು ಸನ್ನದ್ಧವಾಗಿದ್ದೇವೆ. ಇಳಿಕೆ ಸವಾಲು ಏಕೆ?

ಚಂದ್ರನಿಂದ 30 ಕಿ.ಮೀ. ಎತ್ತರದಲ್ಲಿ ಹಾರುತ್ತಿದ್ದಾಗ ಅಡ್ಡಲಾಗಿ ಇರುತ್ತದೆ ವಿಕ್ರಂ ಲ್ಯಾಂಡರ್‌

ಆದರೆ, ಕೆಳಕ್ಕಿಳಿಯುವಾಗ ಲ್ಯಾಂಡರ್‌ ನೇರಗೊಳ್ಳಬೇಕು. ಇದು ಅತ್ಯಂತ ಕ್ಲಿಷ್ಟವಾದ ಪ್ರಕ್ರಿಯೆ

ಲ್ಯಾಂಡರ್‌ನ 4 ಎಂಜಿನ್‌ ಬಳಸಿ ವೇಗ ತಗ್ಗಿಸಿ, ಇತರೆ 8 ಎಂಜಿನ್‌ ಬಳಸಿ ದಿಕ್ಕು ಬದಲಿಸಬೇಕು

ಎಂಜಿನ್‌, ಇಂಧನ ಬಳಕೆ, ದೂರ ಲೆಕ್ಕಾಚಾರ, ಎಲ್ಲ ಉಪಕರಣಗಳ ಸುಸ್ಥಿತಿ ಪಕ್ಕಾ ಆಗಿರಬೇಕು

2 ರೀತಿಯ ಬ್ರೇಕಿಂಗ್‌, ಲ್ಯಾಂಡಿಂಗ್‌ ಸ್ಥಳ ಪರಿಶೀಲನೆ ಬಳಿಕ ಅಂತಿಮವಾಗಿ ನೆಲಕ್ಕಿಳಿಯಬೇಕು

ಯಾವುದೇ ಹಂತದಲ್ಲಿ ತುಸು ವ್ಯತ್ಯಾಸ ಉಂಟಾದರೂ ಲ್ಯಾಂಡಿಂಗ್‌ ಪ್ರಕ್ರಿಯೆ ಬುಡಮೇಲು

ಹಾಗಾಗಿಯೇ ಈ ಪ್ರಕ್ರಿಯೆಯನ್ನು ಇಸ್ರೋ ‘ಆತಂಕದ 20 ನಿಮಿಷ’ ಎಂದು ಬಣ್ಣಿಸಿರುವುದು

ಇಂದು ಆಗದಿದ್ದರೆ  27ಕ್ಕೆ ಮರುಯತ್ನ

ಒಂದು ವೇಳೆ, ಅನಿರೀಕ್ಷಿತ ಕಾರಣದಿಂದ ಬುಧವಾರ ಸಂಜೆ ಚಂದ್ರನ (Moon)ಮೇಲೆ ಇಳಿಯುವ ಪ್ರಕ್ರಿಯೆ ನಡೆಸಲು ಸಾಧ್ಯವಾಗದಿದ್ದರೆ, ಆ.27ರ ಭಾನುವಾರದಂದು ಮರು ಯತ್ನ ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ.

ರಾಜ್ಯಾದ್ಯಂತ ಪೂಜೆ, ಹೋಮ, ಪ್ರಾರ್ಥನೆ:

ಕೋಟ್ಯಂತರ ಭಾರತೀಯ ಹಾರೈಕೆಗಳೊಂದಿಗೆ ವಿಕ್ರಂ ಲ್ಯಾಂಡರ್‌ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯಲಿ ಎಂದು ಪ್ರಾರ್ಥಿಸಿ ವಿವಿಧ ದೇಗುಲಗಳಲ್ಲಿ ಮಂಗಳವಾರ ವಿಶೇಷ ಪೂಜೆ, ಹೋಮ-ಹವನ ನಡೆದಿವೆ.

ವಿಡಿಯೋ ಕಾನ್ಫರೆನ್ಸ್‌ ಮೂಲಕ ಮೋದಿ ಭಾಗಿ

15ನೇ ಬ್ರಿಕ್ಸ್‌ ಶೃಂಗಕ್ಕಾಗಿ ದಕ್ಷಿಣ ಆಫ್ರಿಕಾಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್‌ನ ಐತಿಹಾಸಿಕ ಕ್ಷಣದಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಭಾಗಿಯಾಗಲಿದ್ದಾರೆ.  ನೂರಾ ನಲವತ್ತು ಕೋಟಿ ಭಾರತೀಯರ ಶುಭ ಹಾರೈಕೆ ಹಾಗೂ ಪ್ರಾರ್ಥನೆಯೊಂದಿಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO)ಯ ಚಂದ್ರಯಾನ-3 ನೌಕೆ ಬುಧವಾರ ಸಂಜೆ 6.04ಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ಸಜ್ಜಾಗಿದ್ದು, ಈ ಐತಿಹಾಸಿಕ ಸಂದರ್ಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಅನೂಹ್ಯ ಕುತೂಹಲಗಳನ್ನು ಒಡಲಲ್ಲಿಟ್ಟುಕೊಂಡಿರುವ, ಈವರೆಗೂ ವಿಶ್ವದ ಯಾವುದೇ ದೇಶವೂ ಭೇದಿಸದ ಚಂದ್ರನ ದಕ್ಷಿಣ ಧ್ರುವದಲ್ಲಿ ಇಸ್ರೋ ವಿಜ್ಞಾನಿಗಳು (SCIENTIST)ನೌಕೆ ಇಳಿಸುತ್ತಿದ್ದು, ಈ ಸಾಹಸವನ್ನು ಇಡೀ ವಿಶ್ವವೇ ಕುತೂಹಲದಿಂದ ಎದುರು ನೋಡುತ್ತಿವೆ.

ಎಲ್ಲವೂ ಅಂದುಕೊಂಡಂತೆಯೇ ನಡೆದರೆ, ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿದ ವಿಶ್ವದ ಮೊದಲ ದೇಶ ಎಂಬ ದಾಖಲೆಗೆ ಭಾರತ ಪಾತ್ರವಾಗಲಿದೆ. ಜತೆಗೆ ಚಂದ್ರನ ಮೇಲೆ ಯಶಸ್ವಿಯಾಗಿ ನೌಕೆ ಇಳಿಸಿ ಅಧ್ಯಯನ ಕೈಗೊಂಡ ವಿಶ್ವದ 4ನೇ ರಾಷ್ಟ್ರ ಎಂಬ ಹೊಸ ಇತಿಹಾಸವನ್ನು ಭಾರತ ಹಾಗೂ ಇಸ್ರೋ ಬರೆಯಲಿವೆ. ಈವರೆಗೆ ಅಮೆರಿಕ (America), ಚೀನಾ (China) ಹಾಗೂ ಸೋವಿಯತ್‌ ಒಕ್ಕೂಟಗಳು ಈ ಮಾತ್ರ ಈ ಸಾಧನೆ ಮಾಡಿವೆ.  ನಾವೂ ಚಂದಿರನ ಮೇಲೆ ನೌಕೆ ಇಳಿಸಬಲ್ಲೆವು, ಚಂದ್ರನ ಮೇಲೆಯೇ ವೈಜ್ಞಾನಿಕ ಪ್ರಯೋಗಗಳನ್ನು ಮಾಡಬಲ್ಲೆವು ಎಂಬ ಸಂದೇಶ ‘ಚಂದ್ರಯಾನ-3’(Chandrayaan3) ಮೂಲಕ ಇಡೀ ವಿಶ್ವಕ್ಕೇ ರವಾನೆಯಾಗಲಿದೆ ಎಂಬುದು ಗಮನಾರ್ಹ.

ಚಂದಿರನ ಮೇಲೆ ನೌಕೆ ಇಳಿಸಲು 2019ರ ಸೆಪ್ಟೆಂಬರ್‌ನಲ್ಲಿ ಇಸ್ರೋ ‘ಚಂದ್ರಯಾನ-2’ ಕೈಗೊಂಡಿತ್ತು. ನೌಕೆ ಇಳಿಸುವ ಹಂತದಲ್ಲಿ ಆ ಯೋಜನೆ ವೈಫಲ್ಯ ಅನುಭವಿಸಿತ್ತು. ಆ ವೈಫಲ್ಯದಿಂದ ಪಾಠ ಕಲಿತಿರುವ ಇಸ್ರೋ ವಿಜ್ಞಾನಿಗಳು ಜು.14ರಂದು ಚಂದ್ರಯಾನ-3 ನೌಕೆಯನ್ನು ಉಡಾವಣೆ ಮಾಡಿದ್ದರು. 600 ಕೋಟಿ ರು. ವೆಚ್ಚದ ಯೋಜನೆ ಇದಾಗಿದ್ದು, 41 ದಿನಗಳ ಯಾತ್ರೆ ಮುಗಿಸಿ ಈಗ ಚಂದ್ರನನ್ನು ಸಮೀಪಿಸಿದೆ.

17 ನಿಮಿಷದ ಆತಂಕ:

ಈವರೆಗೆ ಚಂದ್ರಯಾನ-3 ಯಶಸ್ವಿಯಾಗಿದೆಯಾದರೂ, ಅದು ಚಂದ್ರನ ಮೇಲೆ ಇಳಿಯುವುದಕ್ಕೆ ಮೊದಲಿನ 17 ನಿಮಿಷ ವಿಜ್ಞಾನಿಗಳ ಪಾಲಿಗೆ ಅತ್ಯಂತ ಆತಂಕಕಾರಿಯಾಗಿದೆ. ಸ್ವತಃ ವಿಜ್ಞಾನಿಗಳೇ ಇದನ್ನು ಹೇಳಿಕೊಂಡಿದ್ದಾರೆ.

ನೌಕೆ ಹೇಗೆ ಇಳಿಯುತ್ತೆ?:

ನೌಕೆ ಇಳಿಯಲು ಸರ್ವರೀತಿಯಲ್ಲೂ ಸಜ್ಜಾಗಿದೆಯೇ ಎಂಬುದನ್ನು ಪರಿಶೀಲಿಸಿದ ತರುವಾಯ ಬೆಂಗಳೂರಿನ ದೊಡ್ಡದ ಆಲದಮರದ ಬಳಿ ಇರುವ ಬ್ಯಾಲಾಳುವಿನ ಇಸ್ರೋ ಕೇಂದ್ರದಿಂದ ಸೂಕ್ತ ಕಮಾಂಡ್‌ಗಳನ್ನು ರವಾನಿಸಲಾಗುತ್ತದೆ. ಇದಾದ ಬಳಿಕವೇ ಕೊನೆಯ 17 ನಿಮಿಷಗಳಲ್ಲಿ ಲ್ಯಾಂಡರ್‌ ಸೂಕ್ತ ಸಮಯ ಹಾಗೂ ಎತ್ತರ ನೋಡಿಕೊಂಡು, ಸೂಕ್ತ ಪ್ರಮಾಣದ ಇಂಧನ ಬಳಸಿಕೊಂಡು, ಚಂದ್ರನ ನೆಲವನ್ನು ಪರಿಶೀಲಿಸಿ ಸ್ವಯಂಚಾಲಿತವಾಗಿ ಎಂಜಿನ್‌ ಚಾಲೂ ಮಾಡಿಕೊಂಡು ಇಳಿಯುವ ಪ್ರಕ್ರಿಯೆ ಆರಂಭಿಸಲಿದೆ. ಯಾವುದೇ ಅಡ್ಡಿ ಅಥವಾ ಪರ್ವತ ಅಥವಾ ಕಂದಕ ಇಲ್ಲದ ಜಾಗವನ್ನು ಪರಿಶೀಲಿಸಿ ಲ್ಯಾಂಡರ್‌ ಇಳಿಯಬೇಕಿದೆ.

30 ಕಿ.ಮೀ. ಎತ್ತರದಿಂದ ಲ್ಯಾಂಡರ್‌ ನಿಧಾನವಾಗಿ ಇಳಿಯಬೇಕಾಗಿದೆ. ಒಟ್ಟು ನಾಲ್ಕು ಎಂಜಿನ್‌ಗಳು ಇದ್ದು, ಆರಂಭದಲ್ಲಿ ನಾಲ್ಕೂ ಎಂಜಿನ್‌ ಚಾಲೂ ಆಗಿ ನೌಕೆಯ ವೇಗವನ್ನು ತಗ್ಗಿಸಲಿವೆ. ಚಂದ್ರನಿಂದ 6.8 ಕಿ.ಮೀ. ಎತ್ತರಕ್ಕೆ ಬಂದಾಗ ಎರಡು ಎಂಜಿನ್‌ಗಳನ್ನು ಮಾತ್ರ ಬಳಸಿಕೊಳ್ಳಲಾಗುತ್ತದೆ. ಚಂದ್ರನಿಂದ 150ರಿಂದ 100 ಮೀಟರ್‌ ಎತ್ತರದಲ್ಲಿದ್ದಾಗ ವಿಕ್ರಂ ಲ್ಯಾಂಡರ್‌ನ ಸೆನ್ಸರ್‌ ಹಾಗೂ ಕ್ಯಾಮೆರಾಗಳು ಜಾಗವನ್ನು ಪರಿಶೀಲಿಸಿ, ನೌಕೆ ಇಳಿಸಲು ನಿಶಾನೆ ತೋರಲಿವೆ. ಚಂದ್ರನ ಅಂಗಳಕ್ಕೆ ಸಮೀಪಿಸುತ್ತಿದ್ದಂತೆ ಅಲ್ಲಿನ ಗುರುತ್ವ ಬಲವನ್ನು ತಪ್ಪಿಸಿ ನೌಕೆಯನ್ನು ನಿಧಾನವಾಗಿ ಇಳಿಸಬೇಕಾಗಿದೆ.

14 ದಿನಕ್ಕಿಂತ ಹೆಚ್ಚು ಬಾಳಿಕೆ ಬರುತ್ತಾ?

ಚಂದ್ರನ ದಕ್ಷಿಣ ಧ್ರುವದಲ್ಲಿ ಸೂರ್ಯೋದಯವಾಗುತ್ತಿದ್ದಂತೆ ವಿಕ್ರಂ ಲ್ಯಾಂಡರ್‌ ಅಲ್ಲಿ ಇಳಿಯಲಿದೆ. ಪ್ರಗ್ಯಾನ್‌ ರೋವರ್‌ (Pragyan rover) ಹೊರಬಂದು ಅಧ್ಯಯನ ಕೈಗೊಳ್ಳಲಿದೆ. ಅಂದಹಾಗೆ, ಚಂದ್ರನಲ್ಲಿ ಒಂದು ದಿನ ಎಂಬುದು ಭೂಮಿಯ 14 ದಿನಗಳಿಗೆ ಸಮ. ಹೀಗಾಗಿ 14 ದಿನಗಳ ಕಾಲ ಅಧ್ಯಯನ ಕೈಗೊಳ್ಳಲು ರೋವರ್‌ಗೆ ಅವಕಾಶ ಸಿಗಲಿದೆ. ಕತ್ತಲಾದ ಬಳಿಕ, ಅಲ್ಲಿ ಮೈನಸ್‌ 180 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರುತ್ತದೆ. 14 ದಿನಗಳ ಕಾಲ ಆ ಉಷ್ಣಾಂಶವನ್ನು ರೋವರ್‌ ಸಹಿಸಿಕೊಂಡರೆ, ಇನ್ನೂ 14 ದಿನ ಕಾರ್ಯನಿರ್ವಹಣೆಗೆ ಅವಕಾಶ ಸಿಗುತ್ತದೆ.

ಚಂದ್ರಯಾನ-3 ಉದ್ದೇಶ ಏನು?

🔹 ಯಶಸ್ವಿಯಾಗಿ ಚಂದ್ರನ ಮೇಲೆ ನೌಕೆ ಇಳಿಸುವ ಕಲೆ ಭಾರತಕ್ಕೂ ಸಿದ್ಧಿಸಿದೆ ಎಂಬುದನ್ನು ನಿರೂಪಿಸಲು

🔹  ಶಾಶ್ವತವಾಗಿ ನೆರಳಿನಿಂದ ಆವೃತವಾಗಿರುವ ದಕ್ಷಿಣ ಧ್ರುವಲ್ಲಿ ನೀರು ಇದೆಯಾ ಎಂದು ಶೋಧಿಸಲು

 🔹 ಚಂದ್ರನ ಮಣ್ಣಿನಲ್ಲಿರಬಹುದಾದ ರಾಸಾಯನಿಕ ಹಾಗೂ ಖನಿಜಾಂಶದ ಬಗ್ಗೆ ತಿಳಿದುಕೊಳ್ಳಲು

 🔹 ಚಂದ್ರನ ಮಣ್ಣು ಹಾಗೂ ಕಲ್ಲು, ಬಂಡೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿಯಲು

 🔹 ಚಂದ್ರನಲ್ಲಿ ಜೀವಿಗಳು ವಾಸಿಸುವ ವಾತಾವರಣವಿದೆಯೇ ಎಂಬುದನ್ನು ಕಂಡುಕೊಳ್ಳಲು

🔹 ಭವಿಷ್ಯದಲ್ಲಿ ಅನ್ಯಗ್ರಹಗಳಿಗೆ ಯಾನ ಕೈಗೊಳ್ಳಲು ಚಂದ್ರನನ್ನು ನೆಲೆಯಾಗಿ ಮಾಡಿಕೊಳ್ಳಲು ಇದು ರೋಮಾಂಚನಕಾರಿ ಸಮಯ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top