ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಲೋಕ ಕಲ್ಯಾಣಾರ್ಥ, ಸಮಗ್ರತೆ, ಹಿಂದೂ ಬಾಂಧವರ ಏಕತೆಗಾಗಿ, ಶ್ರೀ ಮಹಾಲಿಂಗೇಶ್ವರ ದೇವರ ಸಾನಿಧ್ಯ ವೃದ್ಧಿಗಾಗಿ ಸೆ.2 ರಿಂದ 24 ರ ತನಕ ನಡೆಯಲಿರುವ “ಏಕಾದಶ ಕೋಟಿ ಮಹಾಲಿಂಗೇಶ್ವರ ಜಪ”ದ ಪೂರ್ವಭಾವಿ ಸಭೆ ಭಾನುವಾರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ್ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಮಾತನಾಡಿ, ಹಿಂದೂ ಧರ್ಮಕ್ಕೆ ಬಂದಿರುವ ಸರ್ವ ಕಷ್ಟ, ನಷ್ಟಗಳು, ಅತಿವೃಷ್ಠಿ, ಅನಾವೃಷ್ಠಿ, ಜಲಪ್ರಳಯ, ಪಶು, ಪಕ್ಷಿ ಸಂಕುಲ ಗೋವುಗಳಿಗೆ ಬರುವ ಹಿಂಸಾತ್ಮಕ ಕೃತ್ಯಗಳ ನಿವಾರಣೆ, ದುಷ್ಟ ಸಂಹಾರ ಶಿಷ್ಟ ರಕ್ಷಣೆಗಾಗಿ ಸಂಕಷ್ಟ ಚತುರ್ಥಿಯಂದು ಆರಂಭಗೊಂಡು ಹನ್ನೊಂದು ದಿನ ಕಾಲ ನಡೆಯುವ ಈ ಪುಣ್ಯ ಕಾರ್ಯದಲ್ಲಿ ಸರ್ವರೂ ಪ್ರಾರ್ಥಿಸುವಂತೆ ವಿನಂತಿ ಮಾಡಿದರು. ಕನಿಷ್ಠ 11 ಕೋಟಿ ಆಗಬೇಕು. ಒಂದು ತಲೆಗೆ 108 ಬಾರಿಗೆ ಒಂದು ಬಾರಿಯಂತೆ ತಮ್ಮ ತಮ್ಮ ಮನೆಗಳಲ್ಲಿ ಪ್ರಾತಃಕಾಲ ಅಥವಾ ಸಂಜೆ ಅಥವಾ ಎರಡು ಹೊತ್ತು ತಮಗೆ ಅನುಕೂಲವಾಗುವಂತೆ ಶುಚೀರ್ಭೂತರಾಗಿ ಶ್ರೀ ಮಹಾಲಿಂಗೇಶ್ವರ ದೇವರ ಫೋಟೊದ ಮುಂದೆ ಮಣೆ ಅಥವಾ ಚಾಪೆ ಮೇಲೆ ಕುಳಿತು ದೇವರಿಗೆ ದೀಪ ಹಚ್ಚಿ, ಗಂಧ ಅಥವಾ ವಿಭೂತಿಧಾರಣೆ ಮಾಡಿ ದೇವಾಲಯದಿಂದ ನೀಡುವ ಕಾರ್ಡಿನ ಮೇಲೆ ಬರೆದು 108 ನಾಣ್ಯಗಳ ಮೂಲಕ 1080 ಬಾರಿ “ಓಂ ಶ್ರೀ ಮಹಾಲಿಂಗೇಶ್ವರಾಯ ನಮಃ” ಜನ ಮಾಡಬೇಕು ಎಂದು ವಿನಂತಿಸಿದರು.
11 ದಿನಗಳ ಕಾಲ ಜಪಿಸಿದ ಬಳಿಕ ಜಪಿಸಿದ ನಾಣ್ಯಗಳನ್ನು ಯಜ್ಞ ಸಂಪನ್ನಗೊಳ್ಳುವ ದಿನ ದೇವರಿಗೆ ಸಮರ್ಪಿಸುವುದು ಎಂದು ತಿಳಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಭಕ್ತಾದಿಗಳಿಂದ ಸಲಹೆ ಸೂಚನೆಗಳನ್ನು ಸ್ವೀಕರಿಸಲಾಯಿತು. ವೇದಿಕೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ.ಐತ್ತಪ್ಪ ನಾಯ್ಕ್, ರಾಮದಾಸ್ ಗೌಡ, ರವೀಂದ್ರನಾಥ ರೈ ಬಳ್ಳಮಜಲು, ವೀಣಾ ಬಿ.ಕೆ. ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್ ಉಪಸ್ಥಿತರಿದ್ದರು. ಸಮಿತಿ ಸದಸ್ಯ ಶೇಖರ್ ನಾರಾವಿ ಸ್ವಾಗತಿಸಿದರು. ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.