ಪುತ್ತೂರು: ದೇವರಾಜರು ಮಾಡಿದ ಉತ್ತಮ ಕೆಲಸವನ್ನು ದೇಶವೆ ಗುರುತಿಸಿದ್ದು, ಇಂದಿರಾ ಗಾಂಧಿ ಭೂಸುಧಾರಣೆ ಕಾನೂನು ಜಾರಿಗೆ ತಂದಾಗ ಅದನ್ನು ರಾಜ್ಯದಲ್ಲಿ ಜಾರಿಗೆ ತಂದಿದ್ದು ದೇವರಾಜು ಅರಸು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಅವರು ಭಾನುವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಪಂ, ನಗರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ, ಮೌನಕ್ರಾಂತಿಯ ಹರಿಕಾರ ಡಿ.ದೇವರಾಜ ಅರಸುರವರ 108ನೇ ಜನ್ಮ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಲ್ಲರಿಗೂ ಸಮಾನ ಹಕ್ಕನ್ನು ಸಿಗುವಂತೆ ಮಾಡಿರುವುದರ ಜತೆಗೆ ಪ್ರತೀ ಮನೆಗೂ ವಿದ್ಯುತ್ ಸಂಪರ್ಕ, ಗ್ರಾಮೀಣ ಭಾಗದಲ್ಲಿ ಸಾಲಮನ್ನಾ ಮಾಡಿದ್ದರು. ಸರಕಾರದ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತಂದ ಶ್ರೇಷ್ಟ ಮುಖ್ಯಮಂತ್ರಿ ಆಗಿದ್ದರು. ಇಂದಿಗೂ ಜನ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅರಸು ಅವರ ಮಾರ್ಗದರ್ಶನದಿಂದ ಕರ್ನಾಟಕ ಅಭಿವೃದ್ದಿ ಪಥದತ್ತ ಸಾಗುವಂತಾಗಿದೆ ಎಂದರು.
ದೀಪ ಪ್ರಜ್ವಲನೆ ಮಾಡಿದ ಸಹಾಯಕ ಆಯುಕ್ತ ಗಿರೀಶ್ ನಂದನ್ ಮಾತನಾಡಿ, ಸಾಮಾಜಿಕ ಕ್ರಾಂತಿಯ ಮೂಲಕ ಇತಿಹಾಸ ಸೃಷ್ಟಿಸಿದವರು ದೇವರಾಜು ಅರಸು. ಶೋಷಿತ ಮತ್ತು ಹಿಂದುಳಿದ ವರ್ಗಕ್ಕೆ ಶಕ್ತಿ ತುಂಬಿದವರು. ಸ್ವಾತಂತ್ರ್ಯದ ಬಳಿಕ ಶೋಷಿತ ವರ್ಗವನ್ನು ಶೋಷಣೆಯಿಂದ ಮುಕ್ತಗೊಳಿಸಿದವರು ಎಂದರು.
ಸವಣೂರು ವಿದ್ಯಾರಶ್ಮಿ ವಿದ್ಯಾಲಯ ಪ್ರಾಂಶುಪಾಲ ಸೀತಾರಾಮ ಕೇವಳ ಮುಖ್ಯ ಉಪನ್ಯಾಸ ನೀಡಿ, ಭೂಮಾಲೀಕ ಕುಟುಂಬದಿಂದ ಬಂದ ದೇವರಾಜ ಅರಸು ಅವರು ಹಿಂದುಳಿದ ಹಾಗೂ ಶೋಷಿತ ವರ್ಗದ ಜನತೆಯ ಸ್ಥಾನದಲ್ಲಿ ನಿಂತು ಅವರ ಕಲ್ಪನೆಗಳಿಗೆ ಜೀವತುಂಬಿದ ಶ್ರೇಷ್ಟ ವ್ಯಕ್ತಿ. ಮಾನವೀಯ ಮೌಲ್ಯಗಳ ಪ್ರತಿಪಾದನೆ, ಭಾರತೀಯ ಮೌಲ್ಯಗಳ ಮೌಲ್ಯಾಧಾರಿತ ಚಿಂತನೆ., ಅಂತ:ಕರಣ ತುಂಬಿದ ಅವರ ದೂರದೃಷ್ಟಿ ಚಿಂತನೆ. ಅದರ ಪರಿಣಾಮವಾಗಿ ಮೂಡಿಬಂದ ಹಿಂದುಳಿದ ವರ್ಗಗಳ ಹಾಸ್ಟೆಲ್ ಗಳು ಅವರ ಸಾಧನೆಯ ಫಲವನ್ನು ಇಂದಿನ ಮಕ್ಕಳಿಗೆ ನೀಡುತ್ತಿದೆ. ಮಾನವೀಯ ಮೌಲ್ಯಗಳಿಗೆ ಮಿಡಿದ ಅವರ ಸಾಧನೆ ಸಾರ್ವಕಾಲಿಕವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಸಾಧನೆ ಮಾಡಿದ ವಸತಿನಿಲಯ ವಿದ್ಯಾರ್ಥಿಗಳಾದ ಮೇಘನಾ ಜೋಡುಕಟ್ಟೆ, ನಂದೀಶ್ ಎ, ನಿಹಾಲ್ ಪುತ್ತೂರು, ಸಚಿತ್ರಾ ಬನ್ನೂರು ಅವರನ್ನು ಗೌರವಿಸಲಾಯಿತು. ಸದ್ಭಾವನಾ ಪ್ರತಿಜ್ಞೆ ಸ್ವೀಕರಿಸಲಾಯಿತು.
ವೇದಿಕೆಯಲ್ಲಿ ತಹಶೀಲ್ದಾರ್ ಜೆ.ಶಿವಶಂಕರ್ ಇದ್ದರು. ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಇಲಾಖೆಯ ತಾಲೂಕು ಕಲ್ಯಾಣಾಧಿಕಾರಿ ರಾಜ್‌ಗೋಪಾಲ್ ಎನ್.ಎನ್..ಸ್ವಾಗತಿಸಿದರು. ಇಲಾಖೆಯ ಪವಿತ್ರಾ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.