ಪುತ್ತೂರು: ಉತ್ತಮ ಸಾಧನೆಗೈದ ಸಹಕಾರ ಸಂಘಗಳಿಗೆ ಜಿಲ್ಲಾ ಸಹಕಾರಿ ಬ್ಯಾಂಕ್ ನಿಂದ ನೀಡುವ ಪ್ರಶಸ್ತಿಗೆ ವಿಶೇಷ ಸಾಧನೆಗೈದ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಭಾಜನವಾಗಿದೆ.
ಪುತ್ತೂರಿನಲ್ಲಿ 2002 ರಲ್ಲಿ ಆರಂಭಗೊಂಡ ಬ್ಯಾಂಕ್ ಉತ್ತಮ ವ್ಯವಹಾರ ಮಾಡಿ ಬಳಿಕದ ದಿನಗಳಲ್ಲಿ ತನ್ನ ಶಾಖೆಯನ್ನು ವಿಸ್ತರಿಸಿ ಪುತ್ತೂರು ಎಸ್ ಎಂಟಿ, ಕಡಬ, ಉಪ್ಪಿನಂಗಡಿ, ನೆಲ್ಯಾಡಿ, ಕುಂಬ್ರ, ಆಲಂಕಾರು, ಪುತ್ತೂರು ಎಪಿಎಂಸಿ, ಕಾಣಿಯೂರು ಹಾಗೂ ಬೆಳ್ಳಾರೆಗಳಲ್ಲಿ ತನ್ನ ಶಾಖೆಗಳನ್ನು ತೆರೆದಿದೆ. ಒಟ್ಟು 9 ಶಾಖೆಗಳನ್ನು ಸಂಘ ಹೊಂದಿದೆ.
ಸಂಘವು ಸುಮಾರು 12,834 ಸದಸ್ಯರನ್ನು ಹೊಂದಿದ್ದು, 2021-22ನೇ ಆರ್ಥಿಕ ವರ್ಷದಲ್ಲಿ ಸುಮಾರು 291 ಕೋಟಿ ವ್ಯವಹಾರ ಮಾಡಿ, 53 ಕೋಟಿ ಸಾಲ ನೀಡಿದೆ. 2021-22ನೇ ಸಾಲಿನಲ್ಲಿ 84.36 ಕೋಟಿ ಲಾಭ ಪಡೆದಿದ್ದು, 2022-23ನೇ ಸಾಲಿನಲ್ಲಿ ಸುಮಾರು 400 ಕೋಟಿ ವ್ಯವಹಾರ ನಡೆಸಿ 74 ಕೋಟಿ ಸಾಲ ನೀಡಿ, 1.05 ಕೋಟಿ ಲಾಭ ಪಡೆದಿದೆ. ಶೇ.99.01 ವಸೂಲಾತಿ ಮಾಡಿದೆ. ಪ್ರತೀ ವರ್ಷ ಲಾಭಾಂಶದಲ್ಲಿ ಡಿವಿಡೆಂಡ್ ನೀಡುತ್ತಾ ಬಂದಿದ್ದು, ಸತತ 8 ವರ್ಷದಲ್ಲಿ ಅಡಿಟ್ ವರದಿಯಲ್ಲಿ “ಎ” ತರಗತಿ ಪಡೆದಿದೆ. ಮುಂದಿನ ದಿನಗಳಲ್ಲಿ ವಿಟ್ಲದಲ್ಲಿ ಶಾಖೆಗಳನ್ನು ತೆರೆಯುವ ಇರಾದೆ ಹೊಂದಿದೆ.
ಈ ಎಲ್ಲಾ ವಿಚಾರಗಳನ್ನು ಪರಿಗಣಿಸಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉತ್ತಮ ಸಾಧನೆಗೈದ ಹಿನ್ನಲೆಯಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ವಿಶಿಷ್ಟ ಸಾಧನೆಯನ್ನು ಗುರುತಿಸಿ ಆ.19 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಬ್ಯಾಂಕ್‍ನ ಉತ್ಕೃಷ್ಟ ಸಹಕಾರಿ ಸೌಧದಲ್ಲಿ ನಡೆಯುವ ಮಹಾಸಭೆಯಲ್ಲಿ ಗೌರವಿಸಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.