ಪುತ್ತೂರು : ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 76 ವರ್ಷಗಳು ಕಳೆದಿದೆ. ಅದಕ್ಕಾಗಿ ಕೋಟ್ಯಾಂತರ ಜನರ ಬಲಿದಾನವಾಗಿದ್ದು, ಅವರ ಆ ಬಲಿದಾನದಿಂದಾಗಿಯೇ ನಮ್ಮ ನೆಲದ ಮೌಲ್ಯ, ನಮ್ಮ ಜೀವನದ ಮೌಲ್ಯಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ. ನಮ್ಮ ದೇಶ ಉಳಿದ ದೇಶಗಳಿಗಿಂತ ಭಿನ್ನವಾಗಿದ್ದು ಇಲ್ಲಿ ನಾವು ಕಲ್ಲು, ಮಣ್ಣು, ನೀರಲ್ಲಿ ದೇವರನ್ನು ಕಾಣುತ್ತೇವೆ. ವ್ಯಕ್ತಿಯನ್ನು ಪೂಜೆ ಮಾಡದೆ ದೇಶವನ್ನು ಪೂಜೆ ಮಾಡುವ ಜನ ಭಾರತೀಯರಾಗಿದ್ದಾರೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ 77ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳ ಸ್ವಾತಂತ್ರ್ಯೋತ್ಸವದ ವಿಶೇಷ ಸಂಚಿಕೆ ವಿಕಸನ ಪ್ರಾಯೋಗಿಕ ಪತ್ರಿಕೆಯನ್ನು ಅನಾವರಣಗೊಳಿಸಲಾಯಿತು. ಧ್ವಜಾರೋಹಣದಲ್ಲಿ ಸುಮಾರು ಆರು ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ ಕೃಷ್ಣ ಭಟ್ ಹಾಗೂ ಆಡಳಿತ ಮಂಡಳಿ ಸದಸ್ಯರು, ವಿವಿಧ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರು, ಸಂಚಾಲಕರು, ಸದಸ್ಯರು, ನಿರ್ದೇಶಕರು, ವಿವೇಕಾನಂದ ಪದವಿ ಕಾಲೇಜು, ಪದವಿಪೂರ್ವ ಕಾಲೇಜು, ಪಾಲಿಟೆಕ್ನಿಕ್, ಇಂಜಿನಿಯರಿಂಗ್& ಟೆಕ್ನಾಲಜಿ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ(ಸಿಬಿಎಸ್‌ಸಿ) ಇಲ್ಲಿನ ಪ್ರಾಂಶುಪಾಲರು,ಭೋದಕ -ಭೋದಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿದ್ಯಾ ಎಸ್ ಕಾರ್ಯಕ್ರಮ ನಿರ್ವಹಿಸಿದರು.