ಪುತ್ತೂರು: ಸತ್ಯಾಗ್ರಹಗಳು, ಅಸಹಕಾರ ನಡೆಗಳು ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದದ್ದು ಹೌದಾದರೂ ಅದರಿಂದಲೇ ಸ್ವಾತಂತ್ರ್ಯ ಬಂತು ಎಂಬುದು ತಪ್ಪುಕಲ್ಪನೆ. ಕ್ರಾಂತಿಕಾರಿಗಳ ಬದುಕಿನ ಪುಟಗಳನ್ನು ತೆರೆದರೆ ಸ್ವಾತಂತ್ರ್ಯಕ್ಕಾಗಿ ನಡೆದ ತ್ಯಾಗಗಳು ಕಣ್ಣಮುಂದೆ ಕಟ್ಟಿಕೊಳ್ಳುತ್ತವೆ ಎಂದು ಉಡುಪಿಯ ವಾಗ್ಮಿ ಶ್ರೀಕಾಂತ ಶೆಟ್ಟಿ ಹೇಳಿದರು.
ಅವರು ನಗರದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ನಡೆದ ಸ್ವಾತಂತ್ರೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪ್ರಪಂಚದ ಇತಿಹಾಸದಲ್ಲಿ ಅನೇಕ ರಾಷ್ಟ್ರಗಳ ಮೇಲೆ ಅನ್ಯಧರ್ಮಿಯರ ದಾಳಿಗಳಾಗಿವೆ. ಪರಿಣಾಮ ಒಂದೆರಡು ದಶಕಗಳ ಒಳಗಾಗಿ ದಾಳಿಗೊಳಗಾದ ದೇಶಗಳ ಮೂಲ ಸಂಸ್ಕೃತಿ, ಧರ್ಮ, ಆಚರಣೆಗಳು ನಾಮಾವಶೇಷಗೊಂಡಿವೆ. ಆದರೆ ಭಾರತ ಮಾತ್ರ ಏಕಮೇವಾದ್ವಿತೀಯವಾಗಿ ದಾಳಿಯ ಅನಂತರವೂ ತನ್ನ ಮೂಲಸತ್ವವನ್ನು ಉಳಿಸಿಕೊಂಡಿದೆ. ಹೀಗೆ ನಮ್ಮತನದ ಉಳಿವಿನ ಹಿಂದೆ ಅನೇಕ ಬಲಿದಾನಗಳಾಗಿವೆ ಎಂಬುದನ್ನು ಮರೆಯಬಾರದು. ಹಿರಿಯರ ತ್ಯಾಗದ ಫಲವನ್ನು ನಾವಿಂದು ಉಣ್ಣುತ್ತಿದ್ದೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ದೇಶಕ್ಕೆ ಸ್ಪಂದಿಸುವ, ದೇಶದ ಹಿತಕ್ಕಾಗಿ ತನ್ನನ್ನು ತಾನು ಅರ್ಪಿಸಿಕೊಳ್ಳುವ ಸಮರ್ಥ ಯುವಸಮೂಹ ತಯಾರಾಗಬೇಕಿದೆ. ದೇಶಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಎಂಬುದನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು. ನಮ್ಮ ವೀರಪರಂಪರೆ, ಕ್ಷಾತ್ರ ತೇಜಸ್ಸಿನ ಇತಿಹಾಸವನ್ನು ಅರಿತು ಮುನ್ನುಗ್ಗಬೇಕು ಎಂದರು.
ಈ ಸಂದರ್ಭದಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಅಂಬಿಕಾ ವಿದ್ಯಾಸಂಸ್ಥೆಗಳಲ್ಲಿ ನಡೆಸಲಾದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯರಾದ ಸುರೇಶ ಶೆಟ್ಟಿ, ಪ್ರಸನ್ನ ಭಟ್, ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ. ಕ್ಯಾಂಪಸ್ ನಿದೇಶಕ ರಾಜೇಂದ್ರ ಪ್ರಸಾದ್, ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸೀಮಾ ನಾಗರಾಜ್, ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು, ಬಪ್ಪಳಿಗೆಯ ಅಂಬಿಕಾ ವಿದ್ಯಾಲಯದ ಪ್ರಾಚಾರ್ಯೆ ಮಾಲತಿ ಡಿ ಉಪಸ್ಥಿತರಿದ್ದರು.
ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿದರು. ಬಪ್ಪಳಿಗೆ ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ ಕಮ್ಮಜೆ ವಂದಿಸಿದರು. ವಿದ್ಯಾರ್ಥಿನಿಯರಾದ ಮಹತಿ ಬಿ, ಪ್ರಣತಿ ಕಲ್ಲೂರಾಯ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕಿಯರಾದ ಕಾವ್ಯಾ ಭಟ್, ಚೈತ್ರಿಕಾ ಹಾಗೂ ಗೌರಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.
ಇದಕ್ಕೂ ಪೂರ್ವದಲ್ಲಿ ಸಂಸ್ಥೆಯಿಂದ ಕಿಲ್ಲೆ ಮೈದಾನದ ಅಮರ್ ಜವಾನ್ ಜ್ಯೋತಿ ಸ್ಮಾರಕದೆಡೆಗೆ ಬೃಹತ್ ಮೆರವಣಿಗೆ, ಜಾಥಾ ನಡೆಯಿತು.