ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಬಹಳಷ್ಟು ಬದಲಾವಣೆಗಳು ಕಾಣಿಸಿಕೊಂಡಿವೆ. ಕೆಲ ದಿನಗಳ ಹಿಂದೆ ಯುವತಿಯೊಬ್ಬಳು ಬುಲೆಟ್ ಬೈಕ್ ಸವಾರಿ ಮಾಡಿ ನಾನೀಗ ರಸ್ತೆಯಲ್ಲಿ ಬೈಕ್ ಓಡಿಸುವಷ್ಟು ಸ್ವಾತಂತ್ರ್ಯ ಪಡೆದುಕೊಂಡಿದ್ದೇನೆ ಎಂದು ಹೇಳಿದ್ದು ಬಹಳ ವೈರಲ್ ಆಗಿತ್ತು. ಇದೀಗ ಹಿಜ್ಜುಲ್ ಮುಜಾಹಿದೀನ್ ಉಗ್ರನ ಮನೆಯವರು ತ್ರಿವರ್ಣ ಧ್ವಜ ಹಾರಿಸಿರುವುದು ಸುದ್ದಿಯಾಗಿದೆ.
ಉಗ್ರ ಮುದಾಸಿ ಕುಟುಂಬದವರು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಓಗೊಟ್ಟು ಭಾನುವಾರ ಮನೆ ಮೇಲೆ ತ್ರಿವರ್ಣಧ್ವಜ ಹಾರಿಸಿದ್ದಾರೆ. ಇದೇ ವೇಳೆ, ದಾರಿ ತಪ್ಪಿರುವ ತಮ್ಮ ಮಗನನ್ನು ಹುಡುಕಿಕೊಡಿ ಎಂದು ಸರ್ಕಾರಕ್ಕೆ ಕೋರಿದೆ.
76ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಹರ್ ಘರ್ ತಿರಂಗಾದ ಭಾಗವಾಗಿ ಹಿಜ್ಜುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಇಬ್ಬರು ವಾಂಟೆಡ್ ಉಗ್ರರ ಕುಟುಂಬಗಳು ಜಮ್ಮುಮತ್ತು
ಸೋಪೋರ್ ಮತ್ತು ಕಿಶ್ಚಾರ್ ಜಿಲ್ಲೆಗಳಲ್ಲಿರುವ ತಮ್ಮಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ.
ಭಯೋತ್ಪಾದನೆ ಪೀಡಿತ ಸೋಪೋರ್ ಪಟ್ಟಣದಲ್ಲಿ ವಾಂಟೆಡ್ ಹಿಜ್ ಕಮಾಂಡರ್ ಜಾವೇದ್ ಮಟ್ಟೂ ಅವರ ಸಹೋದರ ರಯೀಸ್ ಮಟ್ಟೂ ಭಾನುವಾರ ತಮ್ಮಮನೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು. ಈ ವೇಳೆ ಮಾತನಾಡಿದ ಅವರು ‘ಹಿಂದೂಸ್ಥಾನ್ ಹಮಾರಾ ಹೈ, ನಾವೆಲ್ಲರೂ ಭಾರತೀಯರು, ಹಿಂದೂಸ್ಥಾನ್ ಹಮಾರಾ ಹೈ ಔರ್ ಹಮ್ ಸಬ್ ಹಿಂದೂಸ್ಥಾನಿ ಹೈ. ನನ್ನ ಸಹೋದರ ತಪ್ಪು ಮಾರ್ಗವನ್ನು ಆರಿಸಿಕೊಂಡಿದ್ದಾನೆ ಎಂದ ಮಾತ್ರಕ್ಕೆ ನಾನು ನನ್ನ ದೇಶವನ್ನು ದ್ವೇಷಿಸುತ್ತೇನೆ ಎಂದರ್ಥವಲ್ಲ. ನಾನು ನನ್ನ ಹೃದಯದಲ್ಲಿರುವ ದೇಶಭಕ್ತಿ ಮತ್ತು ಪ್ರೀತಿಯಿಂದ ಮಾತ್ರ ತಿರಂಗಾವನ್ನು ಎತ್ತಿದ್ದೇನೆ. ನಾನು ಭಾರತವನ್ನು ಪ್ರೀತಿಸುತ್ತೇನೆ ಎಂದು ಹೇಳಿದ್ದಾರೆ.