ಪುತ್ತೂರು: ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ನೈಜ ಆರೋಪಿಗಳನ್ನು ಪತ್ತೆಹಚ್ಚಿ ಸೂಕ್ತ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಪುತ್ತಿಲ ಪರಿವಾರ ಸಂಘಟನೆ ವತಿಯಿಂದ ಬೃಹತ್ ಮೌನ ಮೆರವಣಿಗೆ, ಪ್ರತಿಭಟನಾ ಸಭೆ ಸೋಮವಾರ ನಡೆಯಿತು.
“ನಮ್ಮ ನಡೆ ನ್ಯಾಯದ ಕಡೆ “ ಎಂಬ ಘೋಷ ವಾಕ್ಯದೊಂದಿಗೆ ನಗರದ ದರ್ಬೆ ವೃತ್ತದಲ್ಲಿ ಮೌನ ಮೆರವಣಿಗೆಗೆ ಚಾಲನೆ ನೀಡಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಜನ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಸೌಜನ್ಯ ಕುಟುಂಬದವರಿಗೆ ನ್ಯಾಯಕ್ಕಾಗಿ ಘೋಷಣೆಗಳನ್ನು ಕೂಗಿದರು. ಪ್ರಥಮ ಬಾರಿ ಎಂಬಂತೆ ಪ್ರತಿಭಟನೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಮೌನ ಮೆರವಣಿಗೆ ದರ್ಬೆ ವೃತ್ತದಿಂದ ಹೊರಟು ಮುಖ್ಯ ರಸ್ತೆಯಲ್ಲಿ ಸಾಗಿ ಬಸ್ ನಿಲ್ದಾಣದ ಸಮೀಪದ ಗಾಂಧೀಕಟ್ಟೆ ಬಳಿ ಸಮಾಪನಗೊಂಡಿತು.
ಸಾವಿರಾರು ಸಂಖ್ಯೆಯ ಜನರು ಸೌಜನ್ಯಾ ಪರ ಭಿತ್ತಿ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗಿ ಕಾಲ್ನಡಿಗೆಯಲ್ಲಿ ಆಗಮಿಸಿದರು. ಗಾಂಧಿ ಕಟ್ಟೆಯ ಬಳಿ ಸುಮಾರು 20 ನಿಮಿಷಗಳ ಕಾಲ ಮುಖ್ಯರಸ್ತೆಯನ್ನು ಬಂದ್ ಮಾಡಿ ರಸ್ತೆಯಲ್ಲೇ ನಿಂತು ಪ್ರತಿಭಟನ ಸಭೆ ನಡೆಯಿತು. ಪೊಲೀಸರು ಬಂದೋಬಸ್ತ್ ಒದಗಿಸಿದರು.
ಮೆರವಣಿಗೆ ಹಾಗೂ ಪ್ರತಿಭಟನ ಸಭೆಯ ಸಂದರ್ಭದಲ್ಲಿ ಪುತ್ತಿಲ ಪರಿವಾರದ ವಿನಂತಿಯಂತೆ ನಗರದ ಕೆಲವು ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಬಳಿಕ ಗಾಂಧೀಕಟ್ಟೆ ಬಳಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಪುತ್ತಿಲ ಪರಿವಾರದ ನಾಯಕ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಜನ್ಯಳ ಸಾವಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಿಜವಾದ ಕಟುಕರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಈ ರೀತಿಯ ಘಟನೆ ಇನ್ನೆಂದೂ ರಾಜ್ಯದಲ್ಲಿ ಆಗಬಾರದು ಎಂಬ ನಿಟ್ಟಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದ ಅವರು, ಈ ಘಟನೆಯಿಂದ ಆರು ವರ್ಷ ಜೈಲಿನಲ್ಲಿದ್ದ ಸಂತೋಷ್ ರಾವ್ ನನ್ನು ಇದೀಗ ಕೋರ್ಟ್ ನಿರಪರಾಧಿಯೆಂದು ಘೋಷಿಸಿದೆ. ಈ ಪ್ರಕರಣದ ನಿಜವಾದ ಅಪರಾಧಿಗಳು, ತನಿಖೆ ನಡೆಸಿದ ನಿಜವಾದ ತನಿಖಾಧಿಕಾರಿಗಳು ಯಾರೂ ಎಂಬ ಪ್ರಶ್ನಿಸಿದ ಅವರು, ನಿಜವಾದ ಅಪರಾಧಿಗಳನ್ನು ಪತ್ತೆ ಹಚ್ಚಲು ಆಂದೋಲನವನ್ನೇ ಕೈಗೊಳ್ಳಲಾಗಿದೆ. ಸೌಜನ್ಯಳಿಗೆ ನ್ಯಾಯ ಸಿಗುವ ತನಕ ನಾವು ವಿರಮಿಸುವುದಿಲ್ಲ. ಮುಂದಿನ ದಿನಗಳಲ್ಲಿ ಸಂಘರ್ಷಗಳು ನಡೆಯುತ್ತಿವೆ ಎಂಬಂತೆ ಪ್ರತಿಭಟನೆಗಳು ಕಾವೇರುತ್ತಿದೆ. ಈ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತ, ಕಾರ್ಯದರ್ಶಿ ಉಮೇಶ್ ಕೋಡಿಬೈಲು, ನಗರ ಅಧ್ಯಕ್ಷ ಅನಿಲ್ ತೆಂಕಿಲ, ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ಮೊದಲಾದವರು ಪಾಲ್ಗೊಂಡಿದ್ದರು. ಪ್ರತಿಭಟನಾ ಸಭೆ ಬಳಿಕ ಸಹಾಯಕ ಆಯುಕ್ತರ ಕಚೇರಿ ಮೂಲಕ ಸರಕಾರಕ್ಕೆ ಮನವಿ ನೀಡಲಾಯಿತು.